ಮಡಿಕೇರಿ, ಆ. ೩: ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಅಬ್ಬಿ ಜಲಪಾತದ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಸಿ. ಸತೀಶ ಅವರು ಕೆ. ನಿಡುಗಣೆ ಪಂಚಾಯಿತಿಗೆ ಆದೇಶಿಸಿದ್ದಾರೆ. ಅಭಿವೃದ್ಧಿ, ದುರಸ್ತಿ ಕಾಮಗಾರಿಗಳೊಂದಿಗೆ ಸ್ವಚ್ಛತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಅಬ್ಬಿ ಜಲಪಾತದಲ್ಲಿನ ದುಸ್ಥಿತಿಯಲ್ಲಿರುವ ಜಲಪಾತ ಸಮೀಪವಿರುವ ವೀಕ್ಷಣಾ ಗೋಪುರ, ಗಾರ್ಡ್ ರೂಮ್ ಹಾಗೂ ಗಾರ್ಡ್ಗಳ ಶೌಚಾಲಯಗಳ ದುರಸ್ತಿಯೊಂದಿಗೆ ನಿರ್ವಹಣೆಯನ್ನೂ ಮಾಡುವಂತೆ ಪಂಚಾಯಿತಿಗೆ ಆದೇಶಿಸಲಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ನಿರ್ಮಿಸಿರುವ ಪ್ಲಾಟ್ಫಾರ್ಮ್, ರೈಲಿಂಗ್, ಪಾಥ್ವೇ, ಮೆಟ್ಟಿಲು, ಪಾರ್ಕಿಂಗ್, ಚೈನ್ಲಿಂಕ್ ಮೆಶ್ಗಳ ದುರಸ್ತಿ ಹಾಗೂ ನಿರ್ವಹಣೆಯನ್ನು ಕೂಡ ವಹಿಸಿಕೊಳ್ಳುವಂತೆ ಪಂಚಾಯಿತಿ ಕ್ರಮ ವಹಿಸಬೇಕಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವುದಲ್ಲದೆ ಉತ್ತಮ ಮಾರ್ಗದರ್ಶನವನ್ನು ಕೂಡ ನೀಡಬೇಕು. ಜಲಪಾತದ ಬಳಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಅಳವಡಿಸಿ ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗುವಂತೆ ಕ್ರಮ ವಹಿಸುವುದಲ್ಲದೆ ರಜಾ ದಿನಗಳಲ್ಲಿ ಪಂಚಾಯಿತಿ ವತಿಯಿಂದ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಪ್ರವಾಸಿಗರಿಗೆ ಉತ್ತಮ ವಾತಾವರಣ ಕಲ್ಪಸುವಂತೆಯೂ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಶುಚಿತ್ವಕ್ಕೆ ಒತ್ತು - ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ
ಜಲಪಾತದ ಸುತ್ತಮುತ್ತ ಶುಚಿತ್ವ ಕಾಪಾಡುವುದಲ್ಲದೆ ಸ್ವಚ್ಛತೆ ನಿರ್ವ Àಣೆಗೆ ಪಂಚಾಯಿತಿ ಕ್ರಮ ವಹಿಸುವಂತೆ ಹಾಗೂ ಪ್ಲಾಸ್ಟಿಕ್ ಮುಕ್ತ ವಲಯ ಎಂಬ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಆದೇಶ ಪತ್ರದ ಮೂಲಕ ತಿಳಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ಅನಿವಾರ್ಯವಿದ್ದಲ್ಲಿ ಒಳಪ್ರವೇಶದಲ್ಲಿನ ಟಿಕೆಟ್ ಕೌಂಟರ್ನಲ್ಲಿ ಪ್ರತಿ ಪ್ಲಾಸ್ಟಿಕ್ ವಸ್ತುವಿಗೆ ರೂ. ೫೦ ರಂತೆ ಠೇವಣಿ ಇಡಬೇಕಾಗಿದ್ದು, ಜಲಪಾತ ವೀಕ್ಷಣೆಯ ನಂತರ ಜಲಪಾತ ಬದಿ ಪ್ಲಾಸ್ಟಿಕ್ ವಸ್ತು ಬಿಸಾಡದೆ ವಾಪಸ್ ತಂದಲ್ಲಿ ಮಾತ್ರ ಈ ಮುಂಗಡ ಠೇವಣಿಯನ್ನು ಸಂಬAಧಿಸಿದ ಪ್ರವಾಸಿಗರಿಗೆ ಹಿಂತಿರುಗಿಸುವ ವ್ಯವಸ್ಥೆಯನ್ನು ಜಾರಿಗೆ ತರುವಂತೆಯೂ ಆದೇಶಿಸಲಾಗಿದೆ.
ಪ್ರವೇಶ ಶುಲ್ಕ ನಿಗದಿ
ಅಬ್ಬಿ ಜಲಪಾತದ ಬಳಿ ಶೌಚಾಲಯ ನಿರ್ವಹಣೆ, ವಾಹನ ನಿಲುಗಡೆ ಸ್ಥಳದಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮೊದಲಾದವುಗಳನ್ನು ಕೆ. ನಿಡುಗಣೆ ಪಂಚಾಯಿತಿ ವತಿಯಿಂದ ಮಾಡಲಾಗುತ್ತಿದೆ. ಈ ಸ್ಥಳದಲ್ಲಿ ಉದ್ಯಾನವನವೊಂದನ್ನು ನಿರ್ಮಿಸಲು ಹಾಗೂ ವಾಹನ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರ ಬಳಕೆಗೆ ಶೌಚಾಲಯ ನಿರ್ಮಿಸಲು ಪಂಚಾಯಿತಿಗೆ ಅನುದಾನ ಕೊರತೆಯಿದ್ದು, ಪ್ರವಾಸಿಗರಿಂದ ಟಿಕೆಟ್ ವಸೂಲಿ ಮಾಡಬೇಕೆಂಬುದಾಗಿ ಪಂಚಾಯಿತಿಯ ಸಭೆಯಲ್ಲಿ ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಇದೀಗ ಟಿಕೆಟ್ ಕೌಂಟರ್ಅನ್ನು ನಿರ್ಮಿಸಿ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಾತಿ ಮಾಡುವ ಸಂಬAಧ ಪಂಚಾಯಿತಿಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ದೊರೆತಿದೆ. ಈ ಹಣದಿಂದಲೇ ಅಭಿವೃದ್ಧಿ ಕಾರ್ಯಗಳು ಮಾಡಬೇಕಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದು, ೧೨ ವರ್ಷ ಮೇಲ್ಪಟ್ಟವರಿಗೆ ರೂ. ೧೦ ರಂತೆ ಪ್ರವೇಶ ಶುಲ್ಕ ವಸೂಲಾತಿಗೆ ಪಂಚಾಯಿತಿಗೆ ಅನುಮತಿ ದೊರೆತಿದೆ. ತಾ. ೧ ರಿಂದ ಇದು ಅನುಷ್ಠಾನಗೊಂಡಿದೆ.