ವೀರಾಜಪೇಟೆ, ಆ. ೩: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಪೈಸಾರಿ ಜಾಗದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು ೫೧ ಮಂದಿಯಿAದ ಅತಿಕ್ರಮಣ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು ಆರ್ಜಿ ಪೈಸಾರಿಯ ಒಟ್ಟು ೮೯.೦೬ ಜಾಗದಲ್ಲಿ ೪೭ ಎಕರೆ ೪೭ ಸೆಂಟುಗಳಷ್ಟು ಜಾಗವನ್ನು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯಾಚರಣೆ ನಡೆಸಿ ಸಂರಕ್ಷಣೆ ಮಾಡಿರುವುದಾಗಿ ತಾಲೂಕು ತಹಶೀಲ್ದಾರ್ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ತಹಶೀಲ್ದಾರ್ ಯೋಗಾನಂದ ಅವರು ಕಳೆದ ೮ ದಿನಗಳಿಂದ ಆರ್ಜಿ ಗ್ರಾಮದ ಗೋಮಾಳ ಪೈಸಾರಿಯಲ್ಲಿ ಸರ್ವೆ ನಡೆಸಿ, ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಜಾಗದ ಅನಧಿಕೃತ ಒತ್ತುವರಿದಾರರನ್ನು ತೆರವುಗೊಳಿಸಿದ್ದಾರೆ. ೫೧ ಮಂದಿ ಅನದಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದು ಒಟ್ಟು ೨೭ ಎಕರೆ ೮ ಸೆಂಟು ಜಾಗವನ್ನು ತೆರವುಗೊಳಿಸಲಾಗಿದೆ.
ಆರ್ಜಿ ಗ್ರಾಮದ ಗೋಮಾಳ ಪೈಸಾರಿಯ ೮೯.೦೬ ಜಾಗದ ಸರ್ವೆಯನ್ನು ಜುಲೈ ೨೭ ರಿಂದ ಕಂದಾಯ ಅಧಿಕಾರಿಗಳು ತಹಶೀಲ್ದಾರ್ ಯೋಗಾನಂದ ಅವರ ನೇತೃತ್ವದಲ್ಲಿ ಆರಂಭಿಸಿ ತಾ. ೨ ರಂದು ಮುಕ್ತಾಯಗೊಳಿಸಿದರು. ಸರ್ವೆ ಪ್ರಕಾರ ೧೬,೫೦ ಎಕರೆ ಸರಕಾರದ ಉದ್ದೇಶಿತ ಸೌಲಭ್ಯಕ್ಕಾಗಿ, ಅರ್ಹ ಫಲಾನುಭವಿಗಳಿಗೆ ಮಂಜುರಾತಿ ೧೯.೦೯ ಎಕರೆ, ಅನಧಿಕೃತ ಒತ್ತುವರಿ, ಸಾರ್ವಜನಿಕ ರಸ್ತೆಗಾಗಿ ೫,೨೭ ಎಕರೆ, ಸಾರ್ವಜನಿಕ ಸ್ಮಶಾನಕ್ಕಾಗಿ ೧ ಎಕರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋಗಾಗಿ ೫ ಎಕರೆ, ಗೋಮಾಳಕ್ಕಾಗಿ ೧೫.೧೨ ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಬಸ್ ಡಿಪೋಗೆ ಅತಿ ದೂರವಾದ ಕಾರಣಕ್ಕೆ ಸಾರಿಗೆ ಸಂಸ್ಥೆ ಈ ಜಾಗವನ್ನು ತಿರಸ್ಕರಿಸಿರುವುದರಿಂದ ಇದನ್ನು ಸರ್ವೆಯ ಉಳಿದ ಜಾಗಕ್ಕೆ ಸೇರಿಸಿ ಒಟ್ಟು ೪೭.೭ ಜಾಗವನ್ನು ಸಂರಕ್ಷಣಾ ಜಾಗವೆಂದು ಗುರುತಿಸಿ ದಾಖಲಿಸಲಾಗಿದೆ
ಈ ೮೯.೦೬ ಗೋಮಾಳ ಪೈಸಾರಿ ಜಾಗದಲ್ಲಿ ಈಗಾಗಲೇ ನಕ್ಸಲ್ ನಿಗ್ರಹ ದಳದ ತಂಡದ ಕಚೇರಿ ಹಾಗೂ ವಸತಿ ಗೃಹಗಳು, ವಾಲ್ಮೀಕಿ ಸಮುದಾಯ ಭವನ, ಮೊರಾರ್ಜಿ ವಸತಿ ಶಾಲೆ, ತಾಲೂಕು ಕಚೇರಿಯಿಂದ ಹಕ್ಕುಪತ್ರ ಪಡೆದ ಅರ್ಹ ಫಲಾನುಭವಿಗಳು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಗೋಮಾಳ ಪೈಸಾರಿ ಜಾಗವನ್ನು ಅಧಿಕೃತ ಸರ್ವೆ ಮೂಲಕ ಗುರುತಿಸಿ ಪತ್ತೆ ಹಚ್ಚುವ ಕಾರ್ಯದಲ್ಲಿ ತಹಶೀಲ್ದಾರ್ ಯೋಗಾನಂದ್, ರೆವಿನ್ಯೂ ಇನ್ಸ್ಪೆಕ್ಟರ್ ಎಂ.ಎಲ್. ಹರೀಶ್, ಸರ್ವೆಯರ್ ಶಿವಾನಂದ ರೆಡ್ಡಿ ಕಂದಾಯ ಇಲಾಖೆ, ನಗರ ಪೊಲೀಸ್ ತಂಡ ಸೇರಿದಂತೆ ಸುಮಾರು ೩೦ ಮಂದಿ ಸಿಬ್ಬಂದಿಗಳು ಭಾಗವಹಿಸಿದ್ದರು.
ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗೋಮಾಳ ಸಂರಕ್ಷಣಾ ಸಮಿತಿಯಿಂದ ಸಲ್ಲಿಸಲಾದ ಅರ್ಜಿಯ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಗೋಮಾಳ ಪೈಸಾರಿಯನ್ನು ಅಧಿಕಾರಿಗಳು ಒತ್ತುವರಿ ಅತಿಕ್ರಮಣಗಾರರನ್ನು ತೆರವುಗೊಳಿಸಿ ಗೋಮಾಳ ಪೈಸಾರಿಯ ಜಾಗವನ್ನು ಸಂರಕ್ಷಿಸಿದ್ದಾರೆ.
-ಡಿ.ಎಂ. ರಾಜ್ಕುಮಾರ್