ವರದಿ: ಉಷಾ ಪ್ರೀತಮ್ ವೀರಾಜಪೇಟೆ, ಜು. ೩೦: ವೀರಾಜಪೇಟೆಯ ಪ್ರತಿಷ್ಠಿತ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ ಮೂರ್ನಾಲ್ಕು ತಿಂಗಳಿನಿAದ ವೀರಾಜಪೇಟೆಯ ಗ್ರಾಮಾಂತರ ಪ್ರದೇಶ ಮತ್ತು ನಗರದ ಹಲವು ವಾರ್ಡ್ಗಳಲ್ಲಿ ಅಡುಗೆ ಅನಿಲ ಸುರಕ್ಷತೆಯನ್ನು ಪರೀಕ್ಷೆ ಮಾಡುತ್ತೇವೆ; ನಮಗೆ ಹೆಚ್.ಪಿ. ಕಂಪೆನಿಯಿAದ ಆದೇಶ ಬಂದಿದೆ ಎಂದು ಹೇಳಿಕೊಂಡು ಮನೆ ಮನೆಗೆ ತೆರಳಿ ಗ್ಯಾಸ್ ಪರಿಶೀಲನೆಗೆಂದು ಅಕ್ರಮವಾಗಿ ಹಣ ವಸೂಲಾತಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

‘ನೀವು ೨೫೦ ರೂಪಾಯಿ ಹಣ ಕಟ್ಟಿ. ಈಗಲೇ ನಿಮ್ಮ ಗ್ಯಾಸ್ ಪರೀಕ್ಷೆ ಮಾಡಿಸದೇ ಹೋದರೆ ನಿಮ್ಮ ಮನೆಗೆ ಗ್ಯಾಸ್ ಸಂಪರ್ಕ ಕಡಿತಗೊಳಿಸಲಾಗುತ್ತದೆ’ ಎಂದು ಹೆದರಿಕೆ ಹುಟ್ಟು ಹಾಕುವ ಮೂಲಕ, ಮಗ್ಗುಲ, ವಿನಾಯಕ ನಗರ, ಐಮಂಗಲ ಹೀಗೆ ಹಲವು ಕಡೆ ಮನೆಗೆ ೨೫೦ ರೂ.ಗಳಂತೆ ಹಣ ಪಡೆದು ವಂಚಿಸಲಾಗಿದೆ.

ಗ್ರಾಹಕರು ಹೀಗೂ ಒಂದು ಸುರಕ್ಷಿತ ವಿಧಾನ ಇರಬಹುದು ಎಂದು ಹಣ ಕೊಟ್ಟು ಸುಮ್ಮನಾಗಿದ್ದಾರೆ..!

ಶುಕ್ರವಾರದಂದು ಮಲೆತಿರಿಕೆ ಬೆಟ್ಟದಲ್ಲಿ ಒಂದು ಮನೆಗೆ ತೆರಳಿದ ಗ್ಯಾಸ್ ಸಿಬ್ಬಂದಿ ಮನೆಯಲ್ಲಿ ತಂದೆ-ತಾಯಿ ಇಲ್ಲ ಕೆಲಸಕ್ಕೆ ಹೋಗಿದ್ದಾರೆ ಎಂದು ಹೇಳಿದರೂ ಕೇಳದೆ ಅಡುಗೆ ಮನೆಗೆ ಅಕ್ರಮ ಪ್ರವೇಶ ಮಾಡಿ ಬಹಳ ಹೊತ್ತು ಗ್ಯಾಸ್ ಪೈಪ್ ಪರೀಕ್ಷೆ ಮಾಡುವಂತೆ ನಟಿಸಿ ಆ ಮನೆಯ ಯುವತಿಯ ಕೈಯಿಂದಲೂ ೨೫೦ ರೂಪಾಯಿ ವಸೂಲಿ ಮಾಡಿಕೊಂಡು ಹೋಗಿದ್ದಾರೆ ಎನ್ನುವ ವಿಷಯ ಸಾರ್ವಜನಿಕರ ನಡುವೆ ಸ್ವಲ್ಪಮಟ್ಟಿಗೆ ಚರ್ಚೆಯಾಗಿದೆ.

ಸಿಬ್ಬಂದಿಗಳನ್ನು ಹಿಡಿದ ಗ್ರಾಹಕರು

ಅದೇ ಮಾದರಿ ಶನಿವಾರ ಬೆಳಿಗ್ಗೆ ತೆಲುಗರ ಬೀದಿಯ ಹಲವು ಮನೆಗಳಿಗೆ ತೆರಳಿದ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳು ಅದೇ ಹಳೇ ತಂತ್ರವನ್ನು ಗ್ರಾಹಕರ ಮುಂದೆ ತೋರ್ಪಡಿಸಿದ್ದಾರೆ. ಹಣ ಕೊಡಲೇಬೇಕು ಇಲ್ಲದೇ ಹೋದರೆ ನಿಮ್ಮ ಮನೆಯ ಗ್ಯಾಸ್ ಈ ಕೂಡಲೇ ಬಂದ್ ಆಗುತ್ತದೆ ಎಂದು ಒತ್ತಾಯಿಸುತ್ತಿದ್ದರು. ಹಣವಿಲ್ಲ ಸಂಜೆ ಕೊಡುತ್ತೇವೆ ಎಂದು ಹೇಳಿದರೂ ಕೇಳದೇ ಒತ್ತಾಯ ಮಾಡಿದಾಗ ತೆಲುಗರ ಬೀದಿ ನಿವಾಸಿ ದಿವಾಕರ್ ಶೆಟ್ಟಿಯವರು ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳಿಗೆ ಹಲವು ಪ್ರಶ್ನೆ ಕೇಳಿದ್ದಾರೆ. ಅಷ್ಟರಲ್ಲಿ ಜನರು ಜಮಾಯಿಸಿದ್ದಾರೆ. ಸಾರ್ವಜನಿಕರು ತಮಗೂ

(ಮೊದಲ ಪುಟದಿಂದ) ಇದೇ ಅನುಭವ ಆಯಿತು. ಹಣ ಕೊಡದೇ ಹೋದರೆ ಮುಂದಿನ ತಿಂಗಳು ನಿಮ್ಮ ಮನೆಯ ಅಡುಗೆ ಅನಿಲ ತುಂಬಿಸಿ ಕೊಡುವುದಿಲ್ಲ ಎಂದೆಲ್ಲಾ ಹೆದರಿಸಿದ್ದಾರೆ ಎಂದು ಪರಸ್ಪರ ಚರ್ಚೆ ಮಾಡಿದ್ದಾರೆ. ಯಾವುದಕ್ಕೂ ಸಮರ್ಪಕ ಉತ್ತರ ನೀಡದ ಸಿಬ್ಬಂದಿಗಳನ್ನು ಅಲ್ಲೇ ಕೆಲಹೊತ್ತು ಇರಿಸಿಕೊಂಡು ಗ್ಯಾಸ್ ಏಜೆನ್ಸಿಯ ಮಾಲೀಕರಿಗೆ ಕರೆ ಮಾಡಿದಾಗ ಅವರು ಹಣ ಹಿಂದಿರುಗಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಹಣ ವಾಪಸ್

ಕೂಡಲೇ ತೆಲುಗರ ಬೀದಿಯಲ್ಲಿ ಗ್ರಾಹಕರಿಂದ ವಸೂಲಿ ಮಾಡಿದ ಹಣವನ್ನು ಸ್ಥಳದಲ್ಲೆ ಅವರಿಗೆ ಹಿಂದಿರುಗಿಸಿ ಕೊಟ್ಟಿದ್ದಾರೆ. ಉಳಿದವರಿಗೆ ‘ರಶೀದಿ ಕೊಡಿ ಹಣ ವಾಪಸ್ ಕೊಡುತ್ತೇವೆ’ ಎಂದು ಏಜೆನ್ಸಿಯವರು ತಿಳಿಸಿದ್ದಾರೆ ಎನ್ನಲಾಗಿದೆ. ಕೂಡಲೇ ತೆಲುಗರ ಬೀದಿ ನಿವಾಸಿ ದಿವಾಕರ್ ಶೆಟ್ಟಿಯವರು ಏಜೆನ್ಸಿ ಮಾಲೀಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ‘ನಿಮ್ಮ ಗ್ಯಾಸ್ ಏಜೆನ್ಸಿಯಿಂದ ಈ ರೀತಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲು ನಿಮ್ಮ ಸಿಬ್ಬಂದಿಗಳಿಗೆ ತಿಳಿಸಿದ್ದೀರಾ?’ ಎಂದು ಸಾರ್ವಜನಿಕರ ಮುಂದೆಯೇ ಪ್ರಶ್ನೆ ಮಾಡಿದ್ದಾರೆ. ‘ಅವರು ನಿಮಗೆ ಇಷ್ಟವಿದ್ದರೆ ಕೊಡಿ’ ಎನ್ನುವ ಉತ್ತರ ನೀಡಿದ್ದಾರೆ. ಈ ವಿಚಾರದ ಸತ್ಯಾಸತ್ಯತೆ ಅರಿಯಲು ವೀರಾಜಪೇಟೆಯ ಮತ್ತೊಂದು ಗ್ಯಾಸ್ ಏಜೆನ್ಸಿಗೆ ದಿವಾಕರ್ ಅವರು ಕರೆ ಮಾಡಿ ಕೇಳಿದಾಗ ಆ ಏಜೆನ್ಸಿಯವರು ‘ನಮಗೆ ಆ ರೀತಿಯ ಯಾವ ಮಾರ್ಗದರ್ಶಿ ಸೂತ್ರವೂ ಬಂದಿಲ್ಲ’ ಎನ್ನುವ ಉತ್ತರ ಬಂದಿದೆ. ಹೆಚ್.ಪಿ. ಗ್ಯಾಸ್ ಏಜೆನ್ಸಿಯ ಮುಖ್ಯ ಕಚೇರಿಗೆ ಕರೆ ಮಾಡಿದಾಗ ಅಲ್ಲಿಂದಲೂ ಇದೇ ಉತ್ತರ ಬಂದಿದೆ.

ಪೊಲೀಸರ ವಿಚಾರಣೆ

ಸ್ಥಳಕ್ಕೆ ನಗರ ಠಾಣೆಯ ಪೊಲೀಸ್ ಅಧಿಕಾರಿ ಶ್ರೀಧರ್ ಆಗಮಿಸಿ ವಿಚಾರಣೆ ನಡೆಸಿದ ಬಳಿಕ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳನ್ನು ತಾಲೂಕು ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.

ಅಲ್ಲಿಯೂ ಅಧಿಕಾರಿಗಳು ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳ ವಿಚಾರಣೆ ನಡೆಸಿದರು. ತೆಲುಗರ ಬೀದಿಯ ಗ್ರಾಹಕರು ತಾಲೂಕು ಕಚೇರಿಯ ಬಳಿಗೂ ಆಗಮಿಸಿ, ಅಧಿಕಾರಿಗಳನ್ನು ‘ನಿಮ್ಮ ಇಲಾಖೆಯಿಂದ ಈ ರೀತಿ ಹಣ ವಸೂಲಿ ಮಾಡಲು ಆದೇಶ ಮಾಡಿದ್ದೀರಾ?’ ಎಂದು ಪ್ರಶ್ನೆ ಮಾಡಿದರು.

ಬಳಿಕ ತೆಲುಗರ ಬೀದಿಯ ಎಲ್ಲಾ ಗ್ರಾಹಕರು ಸೇರಿ ಒಟ್ಟಾಗಿ ವೀರಾಜಪೇಟೆ ತಹಶೀಲ್ದಾರ್ ಅವರಿಗೆ ಗ್ಯಾಸ್ ಏಜೆನ್ಸಿ ವೀರಾಜಪೇಟೆ ಹಾಗೂ ವೀರಾಜಪೇಟೆ ಸುತ್ತಮುತ್ತಲಿನ ಗ್ರಾಹಕರ ಹಗಲು ದರೋಡೆ ನಡೆಸುತ್ತಿದೆ. ಕೂಡಲೇ ಏಜೆನ್ಸಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಹಾಗೂ ಗ್ರಾಹಕರ ಹಣವನ್ನು ಅವರಿಗೆ ಹಿಂದಿರುಗಿಸಿಕೊಡಿಸಬೇಕು ಎನ್ನುವ ಮನವಿ ಸಲ್ಲಿಸಿದ್ದಾರೆ.

ಗ್ರಾಹಕರ ಪ್ರತಿಕ್ರಿಯೆ

ಇಂದು ನಮ್ಮ ಮನೆಗೆ ಬಂದ ಸಿಬ್ಬಂದಿಗಳು ಗ್ಯಾಸ್ ಸುರಕ್ಷತೆ ಪರೀಕ್ಷೆ ಮಾಡುತ್ತೇವೆ. ಮಾಡಿಸದೇ ಹೋದರೆ ನಿಮಗೆ ವಿಮೆ ಸಿಗಲ್ಲ, ಮುಂದಿನ ತಿಂಗಳಿನಿAದ ನಿಮ್ಮ ಮನೆಗೆ ಗ್ಯಾಸ್ ಬರಲ್ಲಾ ಎಂದೆಲ್ಲಾ ಹೇಳಿದರು. ನನಗೆ ಅನುಮಾನ ಬಂದು ಅವರನ್ನು ನೀವು ಗ್ಯಾಸ್ ಸುರಕ್ಷತೆ ಪರೀಕ್ಷೆ ಮಾಡಲು ತರಬೇತಿ ಪಡೆದಿದ್ದೀರಾ, ನಿಮಗೆ ಸರ್ಕಾರದ ಆದೇಶ ಇದೆಯಾ ಎಂದೆಲ್ಲಾ ಪ್ರಶ್ನೆ ಮಾಡಿದಾಗ, ಅವರಿಗೆ ಆ ರೀತಿಯ ಯಾವ ತರಬೇತಿಯೂ ಆಗಿಲ್ಲ ಎನ್ನುವ ವಿಚಾರ ತಿಳಿಯಿತು. ಎಷ್ಟೋ ಮನೆಗಳಲ್ಲಿ ಗ್ಯಾಸ್ ಪರೀಕ್ಷೆ ಮಾಡದೇ ಬರೇ ರಶೀದಿ ಕೊಟ್ಟು ಹಣ ಪಡೆದು ಹೋಗಿದ್ದಾರೆ. ನನ್ನ ಸ್ನೇಹಿತನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಒಳಗೆ ಒತ್ತಾಯಪೂರ್ವಕವಾಗಿ ಹೋಗಿ ಅವರ ಮಗಳ ಕೈಯಿಂದ ಹಣ ಪಡೆದಿದ್ದಾರೆ. ಏಜೆನ್ಸಿ ಮಾಲೀಕರ ಬಳಿ ಪ್ರಶ್ನೆ ಮಾಡಿದರೆ ನಿಮಗೆ ಇಷ್ಟವಿದ್ದರೇ ಕೊಡಬಹುದು ಎಂದರು. ಮತ್ತೊಂದು ಗ್ಯಾಸ್ ಏಜೆನ್ಸಿ ಬಳಿ ಕೇಳಿದರೆ ಆ ರೀತಿಯ ನಿಯಮವೇ ನಮ್ಮಲ್ಲಿ ಇಲ್ಲ ಅಂದರು. ಅಲ್ಲಿಗೆ ಇವರು ಕಳೆದ ನಾಲ್ಕು ತಿಂಗಳಿನಿAದ ವೀರಾಜಪೇಟೆ ಸುತ್ತಮುತ್ತ ಹಣ ವಸೂಲಿ ಮಾಡಿದ್ದಾರೆ. ಇದಕ್ಕೆ ಮಾಲೀಕರು ಸರಿಯಾದ ಸ್ಪಷ್ಟನೆ ಕೊಡಬೇಕು. ಆ ಹಣ ಎಲ್ಲಿಗೆ ಹೋಗುತ್ತದೆ? ಅವರು ಕೊಡುತ್ತಿರುವ ರಶೀದಿ ಕೂಡಾ ಮೇಲ್ನೋಟಕ್ಕೆ ನಕಲಿಯಂತೆ ಕಂಡುಬರುತ್ತಿದೆ. ಏಜೆನ್ಸಿಗೆ ಆ ರೀತಿಯ ನಿಯಮ ಇದ್ದರೆ ಸಾರ್ವಜನಿಕರ ಗಮನಕ್ಕೆ ಮಾಧ್ಯಮಗಳ ಮೂಲಕ ತಂದು ಬಳಿಕ ಹಣ ವಸೂಲಿ ಮಾಡಬೇಕು.

-ದಿವಾಕರ್ ಶೆಟ್ಟಿ, ನೊಂದ ಗ್ರಾಹಕ

ನಮ್ಮ ಮನೆಗೆ ಬಂದು ನೀವು ಹಣ ಕೊಡದೇ ಹೋದರೆ ನಿಮ್ಮ ಮನೆ ಗ್ಯಾಸ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಹೆದರಿಸಿದರು. ನಾನು ದುಡ್ಡಿಲ್ಲ ನಾಳೆ ಕೊಡುತ್ತೇನೆ ಎಂದರೂ ಬಿಡದೇ ಹಣ ತೆಗೆದುಕೊಂಡರು.

-ಗಂಗಾ, ಗೃಹಿಣಿ, ವೀರಾಜಪೇಟೆ