ಸೋಮವಾರಪೇಟೆ, ಜು. ೨೮: ‘ಕೃಷಿ ಸಮಯವಾಗಿದ್ದರೂ ಕೆಲಸ ಬಿಟ್ಟು ಗ್ರಾಮ ಸಭೆಗೆ ಬಂದಿದ್ದೇವೆ. ನಮ್ಮ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳೇ ಗೈರಾದರೆ ಗ್ರಾಮ ಸಭೆಯ ಅವಶ್ಯಕತೆ ಇದೆಯೇ?’ ಎಂದು ಆಕ್ರೋಶಿತರಾದ ಸಾರ್ವಜನಿಕರು ಗ್ರಾಮ ಸಭೆಯನ್ನು ಬಹಿಷ್ಕರಿಸಿ ಹೊರ ಬಂದ ಘಟನೆ ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿ ನಡೆಯಿತು.
ಅಸಮಾಧಾನಿತ ಸಾರ್ವಜನಿಕ ರನ್ನು ಸಮಾಧಾನಪಡಿಸಿದ ನಂತರ ನಡೆದ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ರಸ್ತೆ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗ್ರಾಮಸ್ಥರು ದೂರುಗಳ ಸುರಿಮಳೆಗೈದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಅಧ್ಯಕ್ಷ ರುದ್ರಪ್ಪ ಶೇಖರ್ ಅವರ ಅಧ್ಯಕ್ಷತೆಯಲ್ಲಿ ಅಲ್ಲಿನ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆಯಿತು.
ತೋಳೂರುಶೆಟ್ಟಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಸಂಬAಧಿಸಿದ ಅಬಕಾರಿ ಇಲಾಖೆ, ಗ್ರಾ.ಪಂ.ಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಅಕ್ರಮ ಮದ್ಯ ಮಾರಾಟಕ್ಕೆ ಇಲಾಖೆಯೇ ಪ್ರೋತ್ಸಾಹ ನೀಡುತ್ತಿರುವಂತಿದೆ. ಅಬಕಾರಿ ಇಲಾಖೆ ಇದ್ದೂ ಇಲ್ಲವಾಗಿದೆ. ಗ್ರಾ.ಪಂ. ಸಹ ಮೌನಕ್ಕೆ ಶರಣಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ತೋಳೂರುಶೆಟ್ಟಳ್ಳಿ ಬಸ್ ನಿಲ್ದಾಣವು ಸಂಜೆ ವೇಳೆಯಲ್ಲಿ ಮದ್ಯಪಾನಿಗಳ ಅಡ್ಡೆಯಾಗುತ್ತಿದೆ. ಮಹಿಳೆಯರು ಸೇರಿದಂತೆ ಮಕ್ಕಳು ಓಡಾಡದ ಪರಿಸ್ಥಿತಿ ನಿರ್ಮಾಣ ವಾಗಿದೆ. ರಸ್ತೆ ಬದಿಯಲ್ಲಿ ಮದ್ಯದ ಖಾಲಿ ಪೊಟ್ಟಣಗಳನ್ನು ಎಸೆಯ ಲಾಗುತ್ತಿದೆ. ಪಂಚಾಯಿತಿಯಿAದ ಕೂಗಳತೆಯ ದೂರದಲ್ಲಿಯೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ತಡೆಯೊಡ್ಡದಿರುವುದು ದುರಂತ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಂಗಡಿಗಳ ಪರವಾನಗಿ ರದ್ದುಪಡಿಸಬೇಕೆಂದು ದಿನೇಶ್, ಸುರೇಶ್ ಸೇರಿದಂತೆ ಇತರರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿಯವರು ವಿಫಲವಾಗಿದ್ದಾರೆ ಎಂದು ದೊಡ್ಡತೋಳೂರಿನ ಸುರೇಶ್ ಹಾಗೂ ಕೂತಿ ಗ್ರಾಮದ ದಿನೇಶ್ ದೂರಿದರು.
ಗ್ರಾಮ ಸಭೆಗೆ ಲೋಕೋಪಯೋಗಿ, ಜಲಾನಯನ, ಆಹಾರ, ಕೃಷಿ, ಅಬಕಾರಿ ಸೇರಿದಂತೆ ಇತರ ಇಲಾಖಾಧಿಕಾರಿಗಳು ಗೈರಾಗಿರುವ ಬಗ್ಗೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಸೋಮವಾರಪೇಟೆಯಿಂದ ಕೂತಿ ಗ್ರಾಮದವರೆಗೆ ರಸ್ತೆ ಹಾಳಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೇಲಿ ಸರಿಪಡಿಸಬೇಕು. ಮೇಲ್ಚಾವಣಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಅಡುಗೆ ಮನೆ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದೆ ಎಂದು ಎಸ್.ಎಂ. ರವಿ ಹೇಳಿದರು.
ತೋಟಗಾರಿಕಾ ಇಲಾಖೆಯ ಹೇಮಂತ್ ಅವರು ಯಂತ್ರೋಪಕರಣ ಖರೀದಿ ಹಾಗೂ ಸರ್ಕಾರದಿಂದ ಲಭ್ಯವಿರುವ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ೨ ತಿಂಗಳಲ್ಲಿ ರೈತರಿಗೆ ಹೈಬ್ರೀಡ್ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದರು.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಕರಿಬಸವರಾಜು ಮಾತನಾಡಿ ಫಾರಂ ೫೭ರಡಿ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು. ಇಂದಿನ ಗ್ರಾಮಸಭೆಗೆ ಹಲವು ಇಲಾಖಾಧಿಕಾರಿ ಗಳು ಗೈರಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮುಂದಿನ ಒಂದು ವಾರದೊಳಗೆ ಮತ್ತೊಮ್ಮೆ ಗ್ರಾಮಸಭೆಯನ್ನು ಕರೆಯಬೇಕೆಂದು ಹಲವಷ್ಟು ಸಾರ್ವಜನಿಕರು ಒತ್ತಾಯಿಸಿದರು. ತೋಳೂರುಶೆಟ್ಟಳ್ಳಿಯ ರಾಜಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ರಸ್ತೆ ಸಮಸ್ಯೆ ಬಗೆಹರಿಯದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಮೋಹಿತ್, ನವೀನ್, ದಿವ್ಯ, ಆರತಿ, ಚಂದ್ರಶೇಖರ್, ನೋಡಲ್ ಅಧಿಕಾರಿ ಹೇಮಂತ್ ಸೇರಿದಂತೆ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.