ಚೆಯ್ಯAಡಾಣೆ, ಜು ೨೮ : ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಎಡಪಾಲದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕೂಡಲೇ ಈ ಭಾಗದಲ್ಲಿ ಕಾಡಾನೆಯನ್ನು ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಕೈಗೊಂಡು ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಗ್ರಾಮದ ಎರಟೆಂಡ ಉಮ್ಮರ್, ವೈ.ಎಂ. ಮೊಹಮ್ಮದ್, ದಿ. ಸಿ.ಎ. ಹಂಝ ಅವರ ಮನೆಯ ಅಂಗಳಕ್ಕೆ ಹಾಗೂ ತೋಟಕ್ಕೆ ನುಗ್ಗಿದ ಕಾಡಾನೆ ಉಮ್ಮರ್ ಅವರ ಅರ್ಧ ಎಕರೆ ಕಾಫಿ, ಅಡಿಕೆ, ಬಾಳೆ ಗಿಡUಳನ್ನು ತುಳಿದು ತೀವ್ರ ನಷ್ಟ ಉಂಟು ಮಾಡಿವೆ.

ಪಂಚಾಯಿತಿ ಸದಸ್ಯ ಮಮ್ಮದ್ ಮಾಹಿತಿ ನೀಡಿ ಈ ಭಾಗದಲ್ಲಿ ಕಾಡಾನೆ ಹಾವಳಿ ದಿನದಿಂದ ದಿನೇ ಹೆಚ್ಚಾಗುತ್ತಿದ್ದು ಶಾಲಾ, ಕಾಲೇಜು, ಮದರಸ ವಿದ್ಯಾರ್ಥಿಗಳು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮನೆಯಿಂದ ಹೊರಬರಲು ಭಯ ಪಡುತಿದ್ದು ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನು ಕಾಡಿಗೆ ಓಡಿಸಿ ಗ್ರಾಮಕ್ಕೆ ಕಾಡಾನೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಹಾಗೂ ನಷ್ಟ ಅನುಭವಿಸಿದ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ಒದಗಿಸಲು ಅಗ್ರಹಿಸಿದ್ದಾರೆ.

ಗ್ರಾಮಸ್ಥ ಉಮ್ಮರ್ ಮಾತನಾಡಿ ಇರುವುದು ಅರ್ಧ ಎಕರೆ ತೋಟ; ಅದನ್ನು ಕಾಡಾನೆ ತುಳಿದು ನಾಶ ಪಡಿಸಿದೆ. ಕೂಡಲೇ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಿ ಭವಿಷ್ಯದಲ್ಲಿ ಕಾಡಾನೆ ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ. - ಅಶ್ರಫ್