ಆಲೂರು ಸಿದ್ದಾಪುರ, ಜು. ೨೯: ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಗ್ರಾ.ಪಂ.ಗೆ ಸೇರಿದ ದೊಡ್ಡಳ್ಳಿ ಗ್ರಾಮದ ಸುಂದರ ಪ್ರಕೃತಿ ಮಡಿಲಿನಲ್ಲಿ ಸುಮಾರು ೫೫ ವರ್ಷಗಳ ಹಿಂದೆ ನಿರ್ಮಿಸಲಾದ ಬೃಹತ್ ಕೆರೆ ಸುಮಾರು ೧೨ ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು, ೨೫ ಅಡಿ ಆಳವಿದೆ. ಕೆರೆ ತುಂಬಿ ಹರಿಯುವ ಸಲುವಾಗಿ ಚೆಕ್ಡ್ಯಾಮ್ ಮಾದರಿಯಲ್ಲಿ ಕಟ್ಟೆಯನ್ನು ನಿರ್ಮಿಸಿದ್ದಾರೆ. ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಕಟ್ಟೆಯಲ್ಲಿ ಹರಿದು ನಾಲೆಯ ಮೂಲಕ ಹರಿದು ಆಲೂರುಸಿದ್ದಾಪುರ ಸೇತುವೆ ಮೂಲಕ ಹಾಸನ ಜಿಲ್ಲೆಗೆ ಸೇರಿದ ತರಗಳಲೆ ಕೆರೆಗೆ ಸೇರುತ್ತದೆ.
ಮಳೆಗಾಲದಲ್ಲಿ ದೊಡ್ಡಳ್ಳಿ ಕಟ್ಟೆ ನದಿಯೊಳಗಿರುವ ದ್ವೀಪದಂತೆ ಕಾಣಿಸುತ್ತದೆ. ಕೆರೆ ಮಧ್ಯದಲ್ಲಿ ಮರಗಳು ನೀರಿನಲ್ಲಿ ಮುಳುಗಿ ರೆಂಬೆಗಳು ಕಾಣಿಸುತ್ತವೆ. ಕೆರೆ ಮಧ್ಯ ಇರುವ ಮರದ ರೆಂಬೆಗಳಲ್ಲಿ ಬೆಳ್ಳÀಕ್ಕಿ ಸೇರಿದಂತೆ ವಿವಿಧ ಪಕ್ಷಿಗಳು ಕುಳಿತಿರುವುದನ್ನು ಗಮನಿಸಿದಾಗ ಮಿನಿ ಪಕ್ಷಿಧಾಮದಂತೆ ಕಾಣುತ್ತದೆ. ಕೆರೆ ಕಟ್ಟೆಯಲ್ಲಿ ನೊರೆ ತುಂಬಿ ಹರಿಯುವ ನೀರನ್ನು ನೋಡುವಾಗ ಪುಟ್ಟ ಡ್ಯಾಮ್ನಂತೆ ಕಾಣುತ್ತದೆ. ಈ ಕೆರೆಗೆ ಖಾಸಗಿಯವರು ಮೀನು ಮರಿಗಳನ್ನು ಬಿಡುತ್ತಾರೆ. ವರ್ಷಕೊಮ್ಮೆ ಈ ಕೆರೆಯಲ್ಲಿ ಬಲೆ ಹಾಕಿ ಮೀನು ಬೇಟೆಯಾಡುತ್ತಾರೆ. ಬೇಸಿಗೆಯಲ್ಲಿ ಕೆರೆಯ ನಾಲೆಯಲ್ಲಿ ನೀರನ್ನು ಬಿಡುವುದರಿಂದ ಕೆರೆಯ ನೀರಿನ ಸಂಗ್ರಹ ಕಮ್ಮಿಯಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಕಟ್ಟೆಯಲ್ಲಿ ನೀರು ಬಿಟ್ಟು ತೂಬಿನಲ್ಲಿ ನೀರು ಹರಿಯುವುದನ್ನು ಸ್ಥಗಿತಗೊಳಿಸಿದರೆ ಬೇಸಿಗೆಯಲ್ಲಿ ನೀರು ಕಮ್ಮಿಯಾಗದು. ಬೇಸಿಗೆ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹ ಇದ್ದಲ್ಲಿ ಈ ಕರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಈ ಕೆರೆಯನ್ನು ನೋಡಲು ಅಕ್ಕಪಕ್ಕದ ಜನರು ಬಂದು ವೀಕ್ಷಣೆ ಮಾಡಿ ಸಂತೋಷ ಪಡುತ್ತಾರೆ. ತರಗಳಲೆ ಕೆರೆ ನೀರು ಕೊಲ್ಲಿಯಾಗಿ ಹರಿದು ಹಾಸನ ಜಿಲ್ಲೆಯ ಕೊಣನೂರು ಬಳಿಯ ರಾಮನಾಥಪುರದಲ್ಲಿ ಕಾವೇರಿ ನದಿಗೆ ಸೇರುತ್ತದೆ.
ಪ್ರಕೃತಿ ಸೌಂದರ್ಯ ಮಡಿಲಿನಲ್ಲಿ ನಿರ್ಮಿಸಿರುವ ದೊಡ್ಡಳ್ಳಿ ಕಟ್ಟೆ ಮಳೆಗಾಲದಲ್ಲಿ ಬಹುಬೇಗ ತುಂಬುತ್ತದೆ. ಬೇಸಿಗೆಯಲ್ಲೂ ೧೦ ಅಡಿಯಷ್ಟು ನೀರು ಸಂಗ್ರಹವಾಗಿರುವುದರಿAದ ಮಳೆಗಾಲದಲ್ಲಿ ಬೇಗ ತುಂಬಿ ನೀರು ಕಟ್ಟೆ ಮೂಲಕ ಹಾಸನ ಜಿಲ್ಲೆಯ ಕಡೆಗೆ ಹರಿಯುತ್ತದೆ. ಹಾಸನ ಜಿಲ್ಲಾ ಭಾಗದ ನೂರಾರು ಎಕರೆಯಷ್ಟು ಕೃಷಿ ಜಮೀನಿಗೆ ನೀರುಣಿಸುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಕೆರೆಯನ್ನು ನಿರ್ಮಿಸಿ ಹತ್ತಾರು ಎಕರೆ ಕೃಷಿ ಜಮೀನು ಮುಳುಗಡೆಯಾಗಿದೆ. ಕೆರೆ ಅಚ್ಚುಕಟ್ಟು ಭಾಗದ ರೈತರಿಗೆ ಪ್ರಯೋಜನ ಇಲ್ಲದಿದ್ದರೂ ಈ ಕೆರೆಯ ನೀರು ಹಾಸನ ಜಿಲ್ಲೆಯ ರೈತರಿಗೆ ಉಪಯೋಗವಾಗುತ್ತಿದೆ.
- ದಿನೇಶ್ ಮಾಲಂಬಿ