ಮಡಿಕೇರಿ, ಜು.೨೭: ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಸ್ಮಾರಕದಲ್ಲಿನ ಅಮರ್ ಜವಾನ್ ಯುದ್ಧ ಸ್ಮಾರಕದ ಬಳಿ ಮೊಂಬತ್ತಿ ಗಳನ್ನು ಬೆಳಗಿಸಿ ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭ ಮಾತನಾಡಿದ ಸುಬೇದಾರ್ ಮೇಜರ್ ತಿಮ್ಮಯ್ಯ, ಭಾರತದ ಧೀರಸೈನಿಕರ ಛಲ, ಬುದ್ಧಿವಂತಿಕೆ, ಎದೆಗಾರಿಕೆಯಿಂದ ನಾಲ್ಕೆöÊದು ತಿಂಗಳ ಪರಿಶ್ರಮದ ಬಳಿಕ ಕಾರ್ಗಿಲ್ ಮತ್ತೆ ಭಾರತಕ್ಕೆ ಸೇರುವಂತಾಯಿತು. ಹೀಗಾಗಿ ಭಾರತೀಯ ಸೈನಿಕರ ತ್ಯಾಗ, ಬಲಿದಾನ ವನ್ನು ಯಾರೂ ಮರೆಯುವಂತಿಲ್ಲ ಎಂದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾಪೂವಯ್ಯ ಮಾತನಾಡಿ, ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ನಾಗರಿಕ ಸಮಾಜ ಸದಾ ಋಣಿಯಾಗಿರಬೇಕು ಎಂದು ಹೇಳಿದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಯೋಧರಿಗೆ ಸೂಕ್ತ ಗೌರವ ನೀಡುವ ನಿಟ್ಟಿನಲ್ಲಿ ಪ್ರತೀಯೋರ್ವರೂ ಚಿಂತನೆ ಹರಿಸಬೇಕು ಎಂದರು.

ರೋಟರಿ ಜಿಲ್ಲಾ ಸಮಿತಿ ಪ್ರಮುಖರಾದ ರವೀಂದ್ರರೈ, ಮೋಹನ್ ಪ್ರಭು, ವಿನೋದ್ ಅಂಬೆಕಲ್, ಎ.ಕೆ. ಜೀವನ್, ಡಿ.ಎಂ.ತಿಲಕ್, ರವಿಶಂಕರ್, ಅಜಿತ್ ನಾಣಯ್ಯ, ರತ್ನಾಕರ್ ರೈ, ಜಯಂತ್ ಪೂಜಾರಿ, ಶಂಕರ್, ಕ್ಯಾರಿ ಕಾರ್ಯಪ್ಪ , ಹರೀಶ್ ಕುಮಾರ್, ಸೋನಜಿತ್, ಗಾನಾ ಪ್ರಶಾಂತ್, ಸೇರಿದಂತೆ ಮಿಸ್ಟಿ ಹಿಲ್ಸ್ ಸದಸ್ಯರು ಪಾಲ್ಗೊಂಡಿದ್ದರು. ಯುವಗಾಯಕ ಶಮಿಕ್ ರೈ ದೇಶ ಭಕ್ತಿಗೀತೆ ಹಾಡಿದರು.

ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ ನಿರೂಪಿಸಿದರು. ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು.