ಗೋಣಿಕೊಪ್ಪಲು, ಜು.೨೬: ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಪರಸ್ಪರ ದ್ವೇಷವನ್ನು ಮರೆಯುವುದರ ಮೂಲಕ ಪ್ರೀತಿಯನ್ನು ಬೆಳೆಸಿಕೊಂಡು ಪ್ರೀತಿ, ಮನುಷ್ಯತ್ವ ಬೆಳೆದಾಗ ದ್ವೇಷದ ಭಾವನೆ ನಮ್ಮಿಂದ ಕಿತ್ತು ಹೊರಟು ಹೋಗಲಿದೆ. ಎಲ್ಲಾ ದೇಶಗಳು ಒಂದೇ ಎಂಬ ಭಾವನೆ ಮೂಡಬೇಕು. ಸಹೋದರತ್ವ, ಪ್ರೀತಿ, ಭ್ರ‍್ರಾತೃತ್ವ ನಮ್ಮಲ್ಲಿ ಮೂಡಲಾರಂಭಿಸಿದಾಗ ಪ್ರಪಂಚದಲ್ಲಿ ಶಾಂತಿ ನೆಲೆಸಲು ಕಾರಣವಾಗಲಿದೆ ಎಂದು ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.ಕಾವೇರಪ್ಪ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಸಮೀಪವಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಪುತ್ಥಳಿಯ ಎದುರು ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಎಲ್ಲಾ ಕಡೆ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತಿದೆ. ೨೩ ವರ್ಷಗಳ ಹಿಂದೆ ೧೯೯೯ರ ಮೇ ೩ರಂದು ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ೨೬ರಂದು ಕೊನೆಗೊಂಡಿತ್ತು. ಎರಡೂವರೆ ತಿಂಗಳ ಕಾಲ ನಡೆದ ಹೋರಾಟವಾಗಿತ್ತು. ಅಧಿಕಾರಿಗಳು ಸೇರಿದಂತೆ ೫೧೦ ಸೈನಿಕರನ್ನು ಕಳೆದುಕೊಳ್ಳುವ ದುರ್ಧೈವ ಇದಾಗಿತ್ತು. ಭಾರತದ ಮುಕುಟಮಣಿಯಂತಿರುವ ಕಾಶ್ಮೀರದ ಕಾರ್ಗಿಲನ್ನು ಅತಿಕ್ರಮಿಸಿಕೊಂಡ ಪಾಕ್ ಸೈನಿಕರನ್ನು ಪ್ರತಿಕೂಲ ಹವಾಮಾನದ ಕಠಿಣ ಪರಿಸ್ಥಿತಿಯಲ್ಲಿಯೂ ವೀರಾವೇಶದಿಂದ ಭಾರತೀಯ ಸೈನಿಕರು ಬಗ್ಗು ಬಡಿದು ಮತ್ತೆ ಭಾರತ ಭೂಶಿರದಲ್ಲಿ ತಿರಂಗ ಹಾರಿಸಿದ್ದರು.
ಭಾರತದ ಹೆಮ್ಮೆಯ ಸೈನಿಕರ ಧೀರ ಶೂರತೆಯ ಪ್ರತೀಕವಾಗಿ ಮತ್ತು ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಭಾರತದ ೫೧೦ ಸೈನಿಕರ ಸ್ಮರಣೆಯಲ್ಲಿ ಪ್ರತಿ ವರ್ಷ ಜುಲೈ ೨೬ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿಗೂ ಭಾರತದ ಸೈನಿಕರ ತ್ಯಾಗಬಲಿದಾನದ ನೆನಪಾಗಿ ಆಚರಿಸಲ್ಪಡುತ್ತಿದೆ ಎಂದು ಹೇಳಿದರು. ಯುವಜನಾಂಗ ಯುವಪೀಳಿಗೆ ಯೋಚಿಸಬೇಕಾದ ಪ್ರಮುಖ ಅಂಶವೆAದರೆ ಹೋರಾಟದ ಮೂಲಕ, ಯುದ್ಧದ ಮೂಲಕ ಸಾಧಿಸುವುದು ಏನೂ ಇಲ್ಲ. ಕಾರ್ಗಿಲ್ ವಿಜಯೋತ್ಸವ ಬದಲಾಗಿ ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಆದ ನಷ್ಟವನ್ನು ತುಂಬಿಕೊಡುವ ಶಕ್ತಿ ಯಾರಿಂದಲೂ ಸಾಧ್ಯವಿಲ್ಲ. ಈ ಹೋರಾಟದಲ್ಲಿ ಅಸಂಖ್ಯಾತ ಜೀವವನ್ನು ನಾವು ಕಳೆದುಕೊಳ್ಳಬೇಕಾಯಿತು. ಈ ಜೀವಗಳನ್ನು ಮರಳಿ ತರುವಂತಹ ಪ್ರಯತ್ನ ನಮ್ಮಿಂದ ಖಂಡಿತ ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಣ್ಣುವಂಡ ಮಾದಯ್ಯ ಮಾತನಾಡಿ, ಇಂದು ಸೈನಿಕರ ಕಣ್ಗಾವಲಿನಿಂದ ನಾವುಗಳು ನಮ್ಮ ಮನೆಗಳಲ್ಲಿ ಯಾವುದೇ ಭಯವಿಲ್ಲದೆ ಜೀವನ ಸಾಗಿಸುತ್ತಿದ್ದೇವೆ. ಇದಕ್ಕೆ ನಮ್ಮ ಸೈನಿಕರು ದಿನದ ೨೪ ಗಂಟೆ ಗಡಿಯಲ್ಲಿ ಸೇವೆ ಮಾಡುತ್ತಿರುವುದೇ ಮುಖ್ಯ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಡಾ.ಎ.ಎಸ್.ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಎಂ.ಆರ್.ಅಕ್ರA, ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ, ಹಿರಿಯ ಉಪನ್ಯಾಸಕ ಸಿ.ಪಿ.ಸುಜಯ, ಕ್ಯಾಪ್ಟನ್ ಬ್ರೆöÊಟ್ ಕುಮಾರ್, ಕಚೇರಿ ಅಧೀಕ್ಷಕ ಸೋಮನಾಥ್ ಸೇರಿದಂತೆ ಅಧ್ಯಾಪಕ ವೃಂದ, ಸಿಬ್ಬಂದಿವರ್ಗ, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.