ಸೋಮವಾರಪೇಟೆ, ಜು.೨೬: ರಾಷ್ಟç ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸೈನಿಕರಿಗೆ ಗೌರವ ಸಮರ್ಪಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಸುಧಾರಣೆಗಳಾಗಿವೆ. ಸಂಕಷ್ಟದ ಸನ್ನಿವೇಶಗಳನ್ನು ಎದುರಿಸಲು ಸಹಕಾರಿಯಾಗುವಂತಹ ವ್ಯವಸ್ಥೆಯನ್ನು ಸರ್ಕಾರ ನಿರ್ಮಿಸಿದೆ. ಇದೀಗ ಅಗ್ನಿಪಥ್ ಯೋಜನೆಯ ಮೂಲಕ ಯುವ ಜನಾಂಗ ದೇಶ ಸೇವೆಯಲ್ಲಿ ತೊಡಗುವಂತಹ ಅವಕಾಶಗಳನ್ನು ಒದಗಿಸಿದೆ ಎಂದು ಶಾಸಕ ರಂಜನ್ ಹೇಳಿದರು.
ಅಗ್ನಿಪಥ್ ಯೋಜನೆಯ ಮೂಲಕ ಯುವ ಜನಾಂಗ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ಹೆಚ್ಚಿನ ಉತ್ಸಾಹ ತೋರಬೇಕು ಎಂದು ಕರೆ ನೀಡಿದ ಶಾಸಕ ರಂಜನ್, ದೇಶ ಕಾಯುವ ಸೈನಿಕ ಹಾಗೂ ದೇಶಕ್ಕೆ ಅನ್ನ ನೀಡುವ ರೈತರಿಗೆ ಎಲ್ಲರಿಗೂ ಗೌರವ ಸಲ್ಲಿಸಬೇಕೆಂದು ತಿಳಿಸಿದರು.
ಕಾರ್ಗಿಲ್ ಯುದ್ದದ ಸಂದರ್ಭ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ, ಹಾಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಾಚಪ್ಪ ಅವರು, ಕಾರ್ಗಿಲ್ ಯುದ್ದ ಸಂದರ್ಭದ ಸನ್ನಿವೇಶಗಳ ಬಗ್ಗೆ ಮೆಲುಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಅವರು ವಹಿಸಿ, ದೇಶಪ್ರೇಮ ಪ್ರತಿಯೋರ್ವರ ಮನದಲ್ಲೂ ಸದಾ ಜಾಗೃತವಾಗಿರಬೇಕು. ಈ ದೇಶ ನಮಗೆ ಎಲ್ಲವನ್ನೂ ನೀಡಿದ್ದು, ದೇಶಕ್ಕಾಗಿ ನಾವೇನು ನೀಡಿದ್ದೇವೆ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕು ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.