ಕುಶಾಲನಗರ, ಜು. ೨೩: ಹಾರಂಗಿ ಉದ್ಯಾನವನಕ್ಕೆ ಕಾಡಾನೆಯೊಂದು ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ನಡೆಯದಂತೆ ಎಚ್ಚರ ವಹಿಸುವಲ್ಲಿ ಅರಣ್ಯ ಮತ್ತು ಹಾರಂಗಿ ಭದ್ರತಾ ಪಡೆ ಯಶಸ್ವಿಯಾಗಿದೆ.
ತಾ. ೨೩ರ ಸಂಜೆ ೭ ಗಂಟೆಗೆ ಘಟನೆ ನಡೆದಿದ್ದು ಅತ್ತೂರು ಮೀಸಲು ಅರಣ್ಯ ಕಡೆಯಿಂದ ಕಾಡಾನೆ ಹಾರಂಗಿ ಪ್ರವಾಸಿ ಮಂದಿರದ ಬಳಿಯಿಂದ ಸಂಗೀತ ಕಾರಂಜಿ ಪ್ರದರ್ಶನದ ಸ್ಥಳದ ಮೂಲಕ ದಾಟಿದೆ. ನಂತರ ಆನೆ ಅಲ್ಲಿಂದ ಹೊರಬಂದು ರಸ್ತೆ ದಾಟಿ ಅಣೆಕಟ್ಟು ಎದುರು ಭಾಗದ ಹಾರಂಗಿ ಜನವಸತಿ ಪ್ರದೇಶದ ಮೂಲಕ ಸಾಗಿದೆ. ನಂತರ ಸ್ಥಳೀಯರು, ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಆನೆಯನ್ನು ಅಲ್ಲಿಂದ ಬೆಂಡೆ ಬೆಟ್ಟ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ವ್ಯಾಪ್ತಿಯಲ್ಲಿ ಸೆರೆಹಿಡಿದ ಈ ಮಖಾನ ಆನೆಯನ್ನು ರೇಡಿಯೋ ಕಾಲರ್ ಅಳವಡಿಸಿ ಕಳೆದ ಒಂದು ತಿಂಗಳ ಹಿಂದೆ ಬಂಡಿಪುರಕ್ಕೆ ಸ್ಥಳಾಂತರಿಸ ಲಾಗಿತ್ತು ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಶಿವರಾಮ್ ಮಾಹಿತಿ ನೀಡಿದ್ದಾರೆ.
ನಂತರ ಇದು ನಾಗರಹೊಳೆ ಮೂಲಕ ಕೊಡಗು ಜಿಲ್ಲೆ ಪ್ರವೇಶಿಸಿ ಮತ್ತಿಗೋಡು, ದುಬಾರೆ ಮೂಲಕ ಗುರುವಾರ ಗುಡ್ಡೆಹೊಸೂರು ರಸುಲ್‌ಪುರ ಗ್ರಾಮದಿಂದ ಆನೆಕಾಡು, ಅತ್ತೂರು ಮೀಸಲು ಅರಣ್ಯಕ್ಕೆ ಬಂದಿರುವ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿದೆ.
ಈ ಹಿನ್ನೆಲೆಯಲ್ಲಿ ಆನೆಯ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡದ ಅಧಿಕಾರಿಗಳಿಗೆ ಹಾರಂಗಿ ಅಣೆಕಟ್ಟು ವ್ಯಾಪ್ತಿಯ ಬಳಿ ಇರುವ ಸುಳಿವು ದೊರೆತ ಮೇರೆಗೆ ಸಂಜೆಯಿAದಲೇ ಕಾರ್ಯಾಚರಣೆ ಪ್ರಾರಂಭಿಸಿದ್ದರು.
ಹಾರAಗಿ ಪ್ರವಾಸಿ ಮಂದಿರದ ಬಳಿ ಆನೆಯನ್ನು ಕಂಡ ಭದ್ರತಾ ಪಡೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಕಾಡಾನೆ ನೇರವಾಗಿ ಹಾರಂಗಿ ಅಣೆಕಟ್ಟು ಕಾರಂಜಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಬಂದಿದೆ. ಆ ವೇಳೆಗೆ ಮೊದಲೇ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಈ ಮೂಲಕ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಣೆಕಟ್ಟು ಭದ್ರತಾ ಪಡೆ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಅರಣ್ಯ ವಲಯ ಅಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಅನಿಲ್ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳಾದ ರಂಜನ್, ವಿಲಾಸ್, ದೇವಯ್ಯ, ಡಿಸೋಜ ಮತ್ತು ಆರ್ ಆರ್ ಟಿ ತಂಡದ ಸದಸ್ಯರು ಆನೆಯನ್ನು ಬೆಂಡೆ ಬೆಟ್ಟ ಅರಣ್ಯಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಪ್ರಮುಖರಾದ ಮಣಿ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿ ಯಾವುದೇ ಅನಾಹುತ ಸಂಭವಿಸದAತೆ ಎಚ್ಚರವಹಿಸಿದ್ದು, ಕಾಡಾನೆಯನ್ನು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸುವ ನೆಟ್ಟಿನಲ್ಲಿ ಕಾರ್ಯಚರಣೆ ತಂಡ ಕಾರ್ಯ ಮುಂದುವರಿಸಿದೆ.
- ಚಂದ್ರಮೋಹನ್