ಮಡಿಕೇರಿ, ಜು. ೨೩: ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಜಾಗದಲ್ಲಿ ಇದೀಗ ಗುಡ್ಡ ಕುಸಿದ ಘಟನೆ ಮದೆನಾಡು ಬಳಿಯ ಬಕ್ಕ ಸಮೀಪದಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ೨೦೧೮ರಲ್ಲಿ ಗುಡ್ಡ ಕುಸಿದಿದ್ದ ಜಾಗದಲ್ಲಿ ತೇವಾಂಶ ಉಂಟಾದ ಪರಿಣಾಮ ಗುಡ್ಡಗಳಿಂದ ಮಣ್ಣು ಜಾರುತ್ತಿದೆ ಎಂದು ಅಂದಾಜಿಸಲಾಗಿದ್ದು, ಸಡಿಲಗೊಂಡು ಜಾರಿದ ಮಣ್ಣು ಪಕ್ಕದ ಹರಿಯುವ ನದಿಯಲ್ಲಿ ನಿಂತ ಪರಿಣಾಮ ನೀರಿನಲ್ಲಿ ಒತ್ತಡ ಉಂಟಾಗಿ ಶಬ್ಧ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ.

ಯಾವುದೇ ಅನಾಹುತ ಸಂಭವಿಸ ದಂತೆ ಎಚ್ಚರವಹಿಸ ಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಕ್ಕದಲ್ಲಿ ಯಾವುದೇ ಮನೆ ಅಥವಾ ಸಂಪರ್ಕ ರಸ್ತೆ ಇಲ್ಲದಿರುವ ಕಾರಣ ಜನಜೀವನದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.