ಗೋಣಿಕೊಪ್ಪಲು, ಜು. ೨೩: ಕಾಫಿ ತೋಟವೊಂದರಲ್ಲಿ ಹಸಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದ ಶ್ರೀಮಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋಣಂಗೇರಿ ಯಲ್ಲಿ ೧ ಕೆ.ಜಿ. ಹಸಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ.
ಡಿವೈಎಸ್ಪಿ ನಿರಂಜನ್ ರಾಜೇಅರಸ್ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಅವರ ನಿರ್ದೇಶನ ಮೇರೆ ಆರೋಪಿಗಾಗಿ ಪೊಲೀಸರು ತನಿಖೆ ಕೈಗೊಂಡು ಕೋಣಂಗೇರಿ ಗ್ರಾಮದ ಎಂ. ಪೊನ್ನಣ್ಣ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ಅಕ್ರಮ ಗಾಂಜಾ ಬೆಳೆದ ಆರೋಪದಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶ್ರೀಮಂಗಲ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿಶಂಕರ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಇತ್ತೀಚೆಗೆ ಅಕ್ರಮ ಗಾಂಜಾ ಮಾರಾಟದ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನವಿರುವ ಗಾಂಜಾ ಮಾರಾಟಗಾರರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಹಲವು ಮಂದಿ ಇದೇ ದಂಧೆಯಲ್ಲಿ ತೊಡಗಿದ್ದಾರೆ. ಇಂತಹವರನ್ನು ಕಾನೂನಿನಡಿ ಕ್ರಮಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.