ಸಿದ್ದಾಪುರ, ಜು. ೨೩: ಸಿದ್ದಾಪುರ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಾದ ಇಂಜಿಲಗೆರೆ, ಗುಹ್ಯ, ಬೀಟಿಕಾಡು, ಕರಡಿಗೋಡು, ಹೇರೂರು ಭಾಗದ ಕಾಫಿ ತೋಟಗಳಲ್ಲಿ ೨೫ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೇ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ.
ಇಂಜಿಲಗೆರೆಯ ವಿ. ಶಿವರಾಮ ಎಂಬವರಿಗೆ ಸೇರಿದ ಕಾಫಿ ತೋಟದೊಳಗೆ ಕಾಡಾನೆಗಳು ದಾಳಿ ನಡೆಸಿ ಕಾಫಿ ಹಾಗೂ ಕರಿಮೆಣಸು ಫಸಲುಗಳನ್ನು ನಾಶಗೊಳಿಸಿದ್ದು, ಬೀಟಿಕಾಡು ಕಾಫಿ ತೋಟದೊಳಗೆ ಶುಂಠಿ ಕೃಷಿ ಮಾಡಿದ ಕೃಷಿಕರೊಬ್ಬರ ಕೃಷಿ ಮಾಡಿದ, ಬೆಳೆದು ನಿಂತಿದ್ದ ಕೃಷಿ ಫಸಲುಗಳನ್ನು ತುಳಿದು ಹಾನಿ ಗೊಳಿಸಿದೆ. ಅಲ್ಲದೇ ಡ್ರಮ್ಗಳನ್ನು ತುಳಿದು ಧ್ವಂಸಗೊಳಿಸಿದ್ದು, ಅಪಾರ ನಷ್ಟ ಸಂಭವಿಸಿದೆ. ಸಿದ್ದಾಪುರದ ಗುಹ್ಯ-ಇಂಜಿಲಗೆರೆ ಭಾಗದಲ್ಲಿ ಮರಿಯಾನೆಗಳು ಸೇರಿದಂತೆ ೨೫ಕ್ಕೂ ಅಧಿಕ ಕಾಡಾನೆಗಳು ಸಂಜೆ ಯಾಗುತ್ತಿದ್ದಂತೆ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಇಂಜಿಲಗೆರೆಯ ಮಂಡೇಪAಡ ಪ್ರವೀಣ್ ಬೋಪಯ್ಯ ಅವರ ಕಾಫಿ ತೋಟದೊಳಗೆ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ.
ಕಾರ್ಯಾಚರಣೆ ವಿಫಲ
ಸಿದ್ದಾಪುರದ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಶನಿವಾರದಂದು ಕಾಡಿಗಟ್ಟಲು ಪ್ರಯತ್ನಿಸಿದರು ಮುಖ್ಯ ರಸ್ತೆಗಾಗಿ ಕಾಡಾನೆಗಳು ಮತ್ತೊಂದು ತೋಟದತ್ತ ಸಂಚರಿಸುತ್ತಿವೆ. ಇದರಿಂದ ಕಾರ್ಯಾಚರಣೆ ವಿಫಲಗೊಂಡಿದೆ.