ಗೋಣಿಕೊಪ್ಪಲು, ಜು.೨೧: ಆನೆ ಮಾವುತರ, ಕಾವಾಡಿಯರ ಮತ್ತು ಜಮೇದಾರರ ವೇತನ ತಾರತಮ್ಯದ ಬಗ್ಗೆ ಹಲವು ಸಮಯದಿಂದ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ವೇತನ ತಾರತಮ್ಯ ಸರಿಪಡಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಲಿಖಿತ ಮನವಿ ಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಆನೆ ಮಾವುತರು ಮತ್ತು ಕಾವಾಡಿಗರು ದುಬಾರೆ, ಸಾಕಾನೆಯನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಕನಿಷ್ಟ ವೇತನ ನಿಗದಿ ಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಆನೆ ಮಾವುತರು ಮತ್ತು ಕಾವಾಡಿಯವರ ಸಂಘದ ವತಿಯಿಂದ ಕ್ಷೇತ್ರ ಶಾಸಕರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ ಸಂದರ್ಭ ಈ ಬಗ್ಗೆ ಶಾಸಕರು ಮಾವುತ, ಕಾವಾಡಿಗರಿಗೆ ಮಾಹಿತಿ ನೀಡಿದರು.

ವೇತನ ತಾರತಮ್ಯದ ಸಮಸ್ಯೆಯನ್ನು ಸರ್ಕಾರ ಪರಿಗಣಿಸದಿದ್ದಲ್ಲಿ ಸಂಘದ ಸದಸ್ಯರು ಮುಂದಿನ ದಸರಾ ಜಂಬೂ ಸವಾರಿಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವ ಬಗ್ಗೆ ಶಾಸಕರಿಗೆ ತಿಳಿಸಿದರು. ಭೇಟಿಯ ವೇಳೆ ಆನೆ ಕಾವಾಡಿಗರ, ಮಾವುತರ ಹಾಗೂ ಜಮೇದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.