ಮಡಿಕೇರಿ, ಜು. ೧೯: ಮೇಕೇರಿ-ತಾಳತ್ತಮನೆ ಮಾರ್ಗದಲ್ಲಿ ಬಿರುಕು ಬಿಟ್ಟಿರುವ ರಸ್ತೆಯನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಮತ್ತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲಿಸಿದರು.

ಬಳಿಕ ಎರಡನೇ ಮೊಣ್ಣಂಗೇರಿ ಯಲ್ಲಿ ರಾಮಕೊಲ್ಲಿ ಸೇತುವೆ ಬಳಿ ಬರೆಜರಿತ ಹಾಗೂ ಎರಡನೇ ಮೊಣ್ಣಂಗೇರಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ೨೦೧೮ ರಲ್ಲಿ ೨ನೇ ಮೊಣ್ಣಂಗೇರಿ ಹಾಗೂ ಕಾಟಕೇರಿ ಭಾಗದಲ್ಲಿ ಬರೆಜರಿತವಾಗಿತ್ತು. ಮತ್ತೆ ಈ ಬಾರಿಯು ಕೂಡ ಇಲ್ಲಿ ಬರೆಜರಿತವಾಗಿದೆ. ಈ ಭಾಗದ ನಿವಾಸಿಗಳ ಪ್ರಕಾರ ರಾತ್ರಿ ೭.೩೦ ರ ಹೊತ್ತಿಗೆ ಜೋರಾದ ಶಬ್ದ ಬಂದಿದೆ. ನಂತರ ಸ್ಥಳೀಯರು ಬಂದು ನೋಡಿದಾಗ ಬರೆಜರಿದಿದ್ದು ತಿಳಿದು ಬಂದಿದೆ ಎಂದರು.

ರಾಮಕೊಲ್ಲಿ ಸೇತುವೆ ವಿಸ್ತಾರವಾದ ಸೇತುವೆಯಾಗಿದ್ದು, ಬರೆಜರಿತದಿಂದ ಸೇತುವೆಯ ಅರ್ಧ ಭಾಗ ಹಾನಿಯಾಗಿದೆ. ಬರೆಜರಿತಕ್ಕೆ ವೈಜ್ಞಾನಿಕವಾಗಿ ನಿಜವಾದ ಕಾರಣ ಪತ್ತೆ ಹಚ್ಚಬೇಕಾಗಿದೆ. ಈ ಭಾಗದ ಮನೆಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ ಎಂದರು.

ಕಾಟಕೇರಿಯ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಮಾಡಲು ಸೂಚಿಸಲಾಗಿದೆ. ಈ ಭಾಗದ ಜನರು ಕೂಲಿ ಕೆಲಸ ಮಾಡುವವರಾಗಿದ್ದು, ಅವರಿಗೆ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಕೆ.ಜಿ. ಬೋಪಯ್ಯ ಹೇಳಿದರು.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಮೊಣ್ಣಂಗೇರಿ ಗ್ರಾಮದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಈ ಭಾಗದ ಜನರು ಒಪ್ಪಿಗೆ ನೀಡಿದ್ದಲ್ಲಿ, ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರ ಮಾಡಿಸ ಲಾಗುವುದು. ಬರೆಜರಿತದಿಂದ ನೀರಿನೊಂದಿಗೆ ಮರದ ದಿಮ್ಮಿಗಳು ಹರಿದು ಬಂದು ಸೇತುವೆಯ ಬಳಿ ನಿಂತಿದೆ. ಅದನ್ನು ಗ್ರಾ.ಪಂ. ವತಿಯಿಂದ ತೆರವು ಮಾಡಲು ಸೂಚಿಸಲಾಗುವುದು. ಅಪಾಯದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಈಗಾಗಲೇ ಅವರವರ ಸಂಬAಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು

ಪ್ರಮುಖರಾದ ಧನಂಜಯ ಅಗೋಳಿಕಜೆ, ಗ್ರಾ.ಪಂ. ಸದಸ್ಯೆ ಪುಷ್ಪಾವತಿ, ಪಿಡಿಓ ಶಶಿಕಿರಣ ಇತರರು ಇದ್ದರು.