ಮಡಿಕೇರಿ, ಜು. ೧೯: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿರುವ ಬೃಹತ್ ಕೆರೆಯೊಂದರ ಕಾಮಗಾರಿಯನ್ನು ಈ ಹಿಂದೆ ತೀರಾ ಅವೈಜ್ಞಾನಿಕವಾಗಿ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಸುರಿದ ಭಾರೀ ಮಳೆಗೆ ಕೆರೆ ಅಪಾಯದಲ್ಲಿದೆ. ಪಂಚಾಯಿತಿಗೆ ಸೇರಿದ ಸಾರ್ವಜನಿಕ ಕೆರೆ ಇದಾಗಿದ್ದು, ನೀರಿನ ಒತ್ತಡದಿಂದಾಗಿ ಒಂದು ಬದಿ ಜರಿದಿದ್ದು, ರಸ್ತೆಗೆ ಹಾನಿಯುಂಟಾಗಿದ್ದು, ರಸ್ತೆ ಅಪಾಯದಲ್ಲಿದೆ.

ಇದೀಗ ಈ ರಸ್ತೆ ಮೂಲಕ ಚೇರಳ ಭಗವತಿ ದೇವಸ್ಥಾನ ಹಾಗೂ ಅಲ್ಲಿನ ಇತರ ಕುಟುಂಬಸ್ಥರ ಮನೆಗಳತ್ತ ವಾಹನ ತೆರಳುವುದು ದುಸ್ತರವಾಗಿದೆ. ತಾತ್ಕಾಲಿಕವಾಗಿ ರಸ್ತೆಗೆ ಮರ ಅಡ್ಡಲಾಗಿ ಇಟ್ಟು ಸಂಪರ್ಕ ಕಡಿತವಾಗಿದೆ. ಅಲ್ಲದೆ ಒತ್ತಿನಲ್ಲಿರುವ ಕೊಂಗೇಟಿರ ದರ್ಶನ್ ಅವರ ತೋಟಕ್ಕೆ ಹಾನಿಯುಂಟಾಗಿದೆ.

ಈ ಕೆರೆಗೆ ಮೇಲ್ಭಾಗದ ಕೊಲ್ಲಿಯಿಂದ ನೀರು ಹರಿದು ಬರುತ್ತಿದ್ದು, ಕೆರೆಯಿಂದ ಸಮರ್ಪಕವಾಗಿ ನೀರು ಹರಿಯದೆ ಈ ಸಮಸ್ಯೆ ಎದುರಾಗಿದೆ. ಕಳೆದ ಸಾಲಿನಲ್ಲಿ ಇದರ ಕಾಮಗಾರಿಯನ್ನು ನಡೆಸಲಾಗಿದ್ದು, ಅವೈಜ್ಞಾನಿಕವಾಗಿದೆ. ಮೇಲ್ಭಾಗದಲ್ಲಿ ಸಣ್ಣ ಪೈಪ್ ಅಳವಡಿಸಿದ್ದು, ಇದರ ಮೂಲಕ ನೀರು ಹರಿಯುತ್ತಿಲ್ಲ. ಮೊನ್ನೆ ಸುರಿದ ಮಳೆಗೆ ಚಿಕ್ಕ ಮೋರಿಯ ಮೂಲಕ ನೀರು ಹರಿದು ಒತ್ತಡಕ್ಕೆ ಬರೆ ಜರಿದಿದ್ದು, ದರ್ಶನ್ ಅವರ ತೋಟಕ್ಕೆ ನೀರು ನುಗ್ಗುತ್ತಿದೆ. ಕೆರೆಯಿಂದ ನೀರು ಹೊರ ಹೋಗಲು ಅಳವಡಿಸಿರುವ ಪೈಪ್ ನಾಲ್ಕೆöÊದು ಅಡಿ ಮೇಲಿದೆ.

ಕಾಮಗಾರಿ ನಡೆಸುವ ಸಂದರ್ಭ ಈ ಬಗ್ಗೆ ಸ್ಥಳೀಯರು ಗುತ್ತಿಗೆದಾರರ ಗಮನಕ್ಕೆ ತಂದಿದ್ದರೂ, ಅವರು ಅದನ್ನು ಪರಿಗಣಿಸದೆ ಕೆಲಸ ಮಾಡಿರುವ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸಂಬAಧಿಸಿದವರು ಗಮನ ಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.