ಯುಕೊ ಆಕ್ರೋಶ

ಮಡಿಕೇರಿ, ಜು. ೧೪: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೊಡವರು ಹಾಗೂ ಕಾವೇರಿ ಮಾತೆಯನ್ನು ನಿಂದಿಸಿರುವ ಪೋಸ್ಟ್ನ ಹಿಂದೆ ಪೂರ್ವಯೋಜಿತ ಷಡ್ಯಂತ್ರ ಅಡಗಿದ್ದು ಕಳೆದ ಹಲವು ವರ್ಷಗಳಿಂದ ರಾಜಕೀಯ ಹಾಗೂ ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ನಿರಂತರವಾಗಿ ಕೊಡವರನ್ನು, ಕೊಡವರ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಅವಹೇಳನ ಮಾಡುತ್ತಾ ಬಂದಿರುವ ಒಂದು ವರ್ಗದ ವಿಕೃತ ಮನಸ್ಸಿನವರು ಈ ಕೃತ್ಯದ ಹಿಂದಿರುವ ಬಲವಾದ ಶಂಕೆಯಿದ್ದು, ಈ ಕುರಿತು ಸಮಗ್ರ ನಿಷ್ಪಕ್ಷಪಾತ ತನಿಖೆ ಆಗಬೇಕೆಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.

ಈಗಾಗಲೇ ಒಂದು ಕೋಮಿಗೆ ಸೇರಿದ ಒಬ್ಬ ವ್ಯಕ್ತಿಯ ಮೇಲೆ ಆರೋಪ ಇದ್ದು, ಆತನ ಇನ್‌ಸ್ಟಾಗ್ರಾಂ ಖಾತೆಯಿಂದಲೇ ಇತ್ತೀಚೆಗಿನ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದ್ದು ಆತನನ್ನು ಕರೆದು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಆತನ ಇನ್‌ಸ್ಟಾಗ್ರಾಂ ಖಾತೆಯ ಪ್ರೊಫೈಲ್ ಫೋಟೋವನ್ನು ನಕಲು ಮಾಡಿ, ಅದೇ ಹೆಸರಿನ ಮತ್ತೊಂದು ಖಾತೆಯನ್ನು ತೆರೆದು ಈ ಕೃತ್ಯ ಎಸಗಿರುವುದಾಗಿ ಹೇಳಲಾಗುತ್ತಿದೆ. ಒಂದು ವೇಳೆ ಅದು ನಿಜ ಎಂದಾದಲ್ಲಿ ಇದು ಕೇವಲ ಯಾವುದೋ ಒಬ್ಬ ವ್ಯಕ್ತಿಯ ಸಾಮಾನ್ಯ ಕೃತ್ಯ ಎಂದು ಪರಿಗಣಿಸುವಂತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಿ ಈ ಕೃತ್ಯದ ಹಿಂದಿರುವವರು ಯಾರೇ ಆದರೂ, ಯಾವುದೇ ಕೋಮಿನವರಾದರೂ, ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಸೇರಿದವರಾದರೂ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊಡವ ಸಮಾಜಗಳು ಕರೆ ನೀಡಿರುವ ಪ್ರತಿಭಟನೆಗೆ ಯುಕೊ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.