ಮಡಿಕೇರಿ, ಜು.೧೩: ಮಳೆಯಿಂದ ಮನೆ ಹಾನಿಗೊಳಗಾದ ಹಾಗೂ ಅಪಾಯದ ಅಂಚಿನಲ್ಲಿರುವ ನಿವಾಸಿಗಳಿಗೆ ಜಿಲ್ಲಾಡಳಿತ, ರೆಡ್ಕ್ರಾಸ್ ಸಂಸ್ಥೆ ಮತ್ತು ಮಡಿಕೇರಿ ನಗರಸಭೆ ಕಾಳಜಿ ಕೇಂದ್ರ ಪ್ರಾರಂಭಿಸಿದೆ.
ನಗರದ ಸ್ಟೀವರ್ಟ್ ಹಿಲ್ನಲ್ಲಿರುವ ಕೊಡಗು ರೆಡ್ಕ್ರಾಸ್ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ಪ್ರಾರಂಭವಾಗಿದ್ದು, ಇಲ್ಲಿ ೧೬ ಮಂದಿ ಆಶ್ರಯ ಪಡೆದಿದ್ದಾರೆ. ಮಡಿಕೇರಿಯ ೩, ಹೆಬ್ಬ್ಬೆಟ್ಟಗೇರಿಯ ೧ ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದು,್ದ ಇಲ್ಲಿರುವ ೧೬ ಮಂದಿಗೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ರೆಡ್ಕ್ರಾಸ್ ವತಿಯಿಂದ ಕಾಳಜಿ ಕೇಂದ್ರದಲ್ಲಿರುವವರ ಆರೋಗ್ಯ ತಪಾಸಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಸೂಚನೆಯಂತೆ ರೆಡ್ ಕ್ರಾಸ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು ರೆಡ್ಕ್ರಾಸ್ ಸಂಸ್ಥೆಯ ಈ ಸಮುದಾಯ ಭವನದಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೆಡ್ಕ್ರಾಸ್ ಸಭಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಪ್ರಧಾನ ಕಾರ್ಯದರ್ಶಿ ಮುರಳಿಧರ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ರೆಡ್ಕ್ರಾಸ್ ಶತಮಾನೋತ್ಸವ ಸಭಾಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಮನವಿಯನ್ನು ರವೀಂದ್ರ ರೈ, ಮುರಳಿಧರ ಸಲ್ಲಿಸಿದರು.