ಸಿದ್ದಾಪುರ, ಜು. ೧೧: ಕಾಡಾನೆಗಳ ಹಿಂಡು ಶಾಲೆಯೊಳಗೆ ನುಗ್ಗಿ ಶಾಲೆಯ ಆವರಣದಲ್ಲಿದ್ದ ಬಾಳೆ ಗಿಡಗಳನ್ನು ಹಾಗೂ ಹೂ ಗಿಡಗಳನ್ನು ನಾಶಗೊಳಿಸಿರುವ ಘಟನೆ ಸೋಮವಾರದಂದು ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಮರಿ ಆನೆಗಳೊಂದಿಗೆ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೆ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.
ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಾಡಾನೆಗಳು ಶಾಲೆಯ ಆವರಣದಲ್ಲಿದ್ದ ಬಾಳೆ ಗಿಡಗಳನ್ನು ಹಾಗೂ ಹೂ ಗಿಡಗಳನ್ನು ತುಳಿದು ತಿಂದು ನಾಶಗೊಳಿಸಿವೆ. ಅಲ್ಲದೆ ಸಮೀಪದ ಜ್ಯೋತಿ ಪೊನ್ನಪ್ಪ ಎಂಬವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ದಾಂದಲೆ ನಡೆಸಿರುತ್ತವೆ.
ಶಾಲೆಗಳಿಗೆ ರಜೆ ಇರುವ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಡಾನೆಗಳ ಹಾವಳಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ವಾಸು