ಗೋಣಿಕೊಪ್ಪಲು, ಜು. ೧೧: ಕಳೆದ ಹಲವು ವರ್ಷಗಳಿಂದ ಕೊಡಗಿನ ರೈತರ, ಬೆಳೆಗಾರರ ಬಹು ಬೇಡಿಕೆಯಾದ ೧೦ ಹೆಚ್.ಪಿ. ಮೋಟರ್ಗಳಿಗೆ ಉಚಿತ ವಿದ್ಯುತ್ ನೀಡುವ ಕುರಿತು ಹೋರಾಟ ನಡೆಸುತ್ತಾ ಬಂದಿರುವ ಕರ್ನಾಟಕ ರಾಜ್ಯ ರೈತ ಸಂಘದಿAದ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ರೈತ ಸಂಘದ ಮುಖಂಡರಾದ ದರ್ಶನ್ ಪುಟ್ಟಣಯ್ಯ ಮುಂದಾಳತ್ವದಲ್ಲಿ ರೈಲ್ವೆ ನಿಲ್ದಾಣದಿಂದ ಮೆರವಣಿಗೆಯಲ್ಲಿ ಸಾಗಿದ ರಾಜ್ಯದ ವಿವಿಧ ಭಾಗದ ರೈತರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ತೆರಳುವ ವೇಳೆ ರೈತರನ್ನು ಮಾರ್ಗ ಮಧ್ಯದಲ್ಲಿಯೇ ಪೊಲೀಸರು ಅಡ್ಡಗಟ್ಟಿದರು. ಈ ವೇಳೆ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಗೆ ೧೦ ಹೆಚ್.ಪಿ. ಮೋಟರ್ಗಳಿಗೆ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ವಿಧಾನ ಸಭೆಯ ಅಧಿವೇಶನದಲ್ಲಿ ಘೋಷಣೆ ಮಾಡಿದ್ದರೂ ಈ ಬಗ್ಗೆ ಇನ್ನೂ ಕೂಡ ಅಧಿಕೃತ ಆದೇಶ ಹೊರ ಬಿದ್ದಿಲ್ಲ ಮುಖ್ಯಮಂತ್ರಿಗಳು ನೀಡಿದ ಮಾತಿನಂತೆ ನಡೆದುಕೊಂಡಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಮನು ಸೋಮಯ್ಯ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
-ಹೆಚ್.ಕೆ. ಜಗದೀಶ್