ಸಿದ್ದಾಪುರ, ಜು. ೧೧: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರಗಳ ನಿವಾಸಿಗಳು ಭಯಭೀತರಾಗಿದ್ದಾರೆ. ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನದಿ ತೀರದ ನಿವಾಸಿಗಳನ್ನು ಸ್ಥಳಾಂತರ ಮಾಡಲು ಸಿದ್ದಾಪುರದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ನದಿ ತೀರದ ನಿವಾಸಿಗಳು ಪರಿಹಾರ ಕೇಂದ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸಿದ್ದಾಪುರ ಕರಡಿಗೋಡು ಗ್ರಾಮದ ನದಿ ತೀರದ ಇಳಿಜಾರು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಚಿಕ್ಕನಹಳ್ಳಿ ಪೈಸಾರಿಯ ಸಂಪರ್ಕ ರಸ್ತೆಯು ಮುಳುಗಡೆಗೊಂಡಿದೆ. ಸಂಪರ್ಕ ಕಡಿತಗೊಂಡಿದೆ. ಮತ್ತಷ್ಟು ಮಳೆ ಸುರಿದರೆ ನೀರಿನ ಮಟ್ಟ ಏರಿಕೆಯಾಗಿ ಕರಡಿಗೋಡುವಿನ ನದಿ ತೀರದ ಇಳಿಜಾರು ಪ್ರದೇಶಗಳಲ್ಲಿರುವ ಮನೆಗಳು ಜಲಾವೃತಗೊಳ್ಳುವ ಸಾಧ್ಯತೆಯಿದೆ.

ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದ ಸಭಾಂಗಣವನ್ನು ಪರಿಹಾರ ಕೇಂದ್ರವಾಗಿ ಗುರುತಿಸಲಾಗಿದ್ದು, ಇಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿರುವುದಾಗಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್ ತಿಳಿಸಿದ್ದಾರೆ. ನೀರಿನಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಾಕರ್, ಶ್ರೀಕಾಂತ್, ಮುತ್ತಪ್ಪ ಹಾಗೂ ಗ್ರಾಮ ಸಹಾಯಕ ಕೃಷ್ಣಾನದಿ ತೀರದಲ್ಲೇ ಠಿಕಾಣಿ ಹೂಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.