ಸೋಮವಾರಪೇಟೆ, ಜು.೧೧: ಈಗಾಗಲೇ ಕಂಪಿಸಿರುವ ಭೂಮಿ, ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಸೇರಿದಂತೆ ಇನ್ನಿತರ ಪಾಕೃತಿಕ ವಿಕೋಪಗಳು ಎದುರಾದರೆ ತಕ್ಷಣಕ್ಕೆ ಪುನರ್ವಸತಿ ಕಲ್ಪಿಸಿ ಕಾಳಜಿ ಕೇಂದ್ರಗಳ ಮೂಲಕ ಸಂತ್ರಸ್ತರನ್ನು ಆರೈಕೆ ಮಾಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸೋಮವಾರಪೇಟೆ ತಾಲೂಕು ಆಡಳಿತ ಈ ಕ್ರಮ ಕೈಗೊಂಡಿದ್ದು, ತಾಲೂಕು ಕಚೇರಿಯಲ್ಲಿ ಅಗತ್ಯ ವಸ್ತುಗಳು, ಗೃಹೋಪಯೋಗಿ ಪರಿಕರಗಳನ್ನು ದಾಸ್ತಾನಿರಿಸಿದೆ. ೩ ರಿಂದ ೪ ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಳಜಿ ಕೇಂದ್ರಗಳ ನಿರ್ವಹಣೆಗೆ ತಹಶೀಲ್ದಾರ್ ಗೋವಿಂದರಾಜು ನೇತೃತ್ವದ ತಂಡ ಕಾರ್ಯೋನ್ಮುಖವಾಗಿದೆ.

ತಾಲೂಕು ಕಚೇರಿಯಲ್ಲಿ ಈಗಾಗಲೇ ಅಕ್ಕಿ, ಬೇಳೆ, ಎಣ್ಣೆ, ಹಾಲಿನ ಪೌಡರ್ ಸೇರಿದಂತೆ ಇತರ ದಿನಸಿ ಸಾಮಾಗ್ರಿಗಳು, ಬಕೆಟ್, ಬೆಡ್, ಬೆಡ್‌ಶೀಟ್, ರಗ್ಗು, ಚಾಪೆ, ಕಂಬಳಿ, ಬಟ್ಟೆ, ಪಾದರಕ್ಷೆಗಳು, ಫ್ಲಾಸ್ಕ್, ರೈನ್‌ಕೋಟ್ ಸೇರಿದಂತೆ ಮಳೆಗಾಲ ದಲ್ಲಿ ಅವಶ್ಯಕವಿರುವ ಎಲ್ಲಾ ವಸ್ತುಗಳನ್ನು ಖರೀದಿಸಿ ಶೇಖರಿಸಿಡಲಾಗಿದೆ.

ಪ್ರಾಕೃತಿಕ ವಿಕೋಪ ಎದುರಾಗಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ತಕ್ಷಣಕ್ಕೆ ನೆರವು ನೀಡಿ, ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಇದರನ್ವಯ ತಾಲೂಕು ಆಡಳಿತದಿಂದ ಸಾಮಾಗ್ರಿಗಳನ್ನು ಖರೀದಿಸಿ ದಾಸ್ತಾನಿರಿಸಲಾಗಿದೆ. ಎಂತಹ ಸಂದರ್ಭದಲ್ಲೂ ಸಾರ್ವಜನಿಕರ ರಕ್ಷಣೆ ಹಾಗೂ ಕಾಳಜಿಯ ಹೊಣೆಯನ್ನು ತಾಲೂಕು ಆಡಳಿತ ಹೊತ್ತಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

೩೦ ಲಕ್ಷ ಅನುದಾನ: ಪ್ರಾಕೃತಿಕ ವಿಕೋಪ, ಪುನರ್ವಸತಿ, ಕಾಳಜಿ ಕೇಂದ್ರ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು, ಪರಿಹಾರ ವಿತರಣೆಗೆ ಸಂಬAಧಿಸಿದAತೆ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್.ನಿಂದ ರೂ. ೩೦ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಕಂಟ್ರೋಲ್ ರೂಂ: ತಾಲೂಕಿನಾದ್ಯಂತ ಉಂಟಾಗುವ ಪ್ರಾಕೃತಿಕ ವಿಕೋಪದ ಬಗ್ಗೆ ತಕ್ಷಣಕ್ಕೆ ಮಾಹಿತಿ ಪಡೆದು ತುರ್ತು ಸ್ಪಂದನೆ ನೀಡುವ ಉದ್ದೇಶದಿಂದ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಮಳೆಯಿಂದ ಹಾನಿ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಇನ್ನಿತರ ಯಾವುದೇ ಸಮಸ್ಯೆಗಳು ಉಂಟಾದರೂ ಸಾರ್ವಜನಿಕರು ತಾಲೂಕು ಕಚೇರಿಯಲ್ಲಿರುವ ಕಂಟ್ರೋಲ್ ರೂಂ (೦೮೨೭೬ ೨೮೨೦೪೫)ಗೆ ಮಾಹಿತಿ ನೀಡಬಹುದು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.