ಸಿದ್ದಾಪುರ ಜು ೯ : ರಾಜಕೀಯ ಸ್ಥಿತಿಗಳ ನಡುವೆ ಆದಿವಾಸಿಗಳು ಮೂಲೆಗುಂಪಾಗಿದ್ದು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕೇರಳ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವ ಎಂ.ವಿ. ಗೋವಿಂದನ್ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೆಲ್ಯಹುದಿಕೇರಿ ಶಾದಿಮಹಲ್ ಸಭಾಂಗಣದಲ್ಲಿ ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆಯೋಜಿಸಿದ್ದ ಆದಿವಾಸಿಗಳ ರಾಜ್ಯ ಮಟ್ಟದ ಎರಡು ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಆದಿವಾಸಿಗಳು ತುಳಿತಕ್ಕೊಳ ಗಾಗುತ್ತಿದ್ದು, ಇದಕ್ಕೆ ಇಲ್ಲಿನ ಜಾತಿ ರಾಜಕರಣ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿ ದರು. ಶ್ರೀಮಂತರು ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತರಾಗುವ ದುರಾಸೆಯಿಂದ ಬಡವರ್ಗದ ಆದಿವಾಸಿ ಸಮುದಾಯ ಮತ್ತಷ್ಟು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿದೆ. ಕೇವಲ ಅಭಿವೃದ್ಧಿಯ ನಾಟಕವಾಡುವ ಬದಲು ಆ ಸಮುದಾಯವನ್ನು ಶೈಕ್ಷಣಿಕವಾಗಿ ಮುಂದೆ ತಂದು ಸರ್ಕಾರಿ ಹುದ್ದೆಗಳಲ್ಲಿ ನೇಮಿಸಿ ಕೊಂಡರೆ ಅವರ ಬೆಳವಣಿಗೆ ತಾನಾಗಿಯೇ ಆಗಲಿದೆ ಎಂದು ಅಭಿಪ್ರಾಯಿಸಿದರು
ಸಂಶೋಧಕಿ ಹಾಗೂ ಜಿ.ಪಂ. ಮಾಜಿ ಉಪಾಧ್ಯಕ್ಷೆ ಡಾ. ಎಚ್.ಎಂ. ಕಾವೇರಿ ಮಾತನಾಡಿ ಆದಿವಾಸಿಗಳ ಅಭಿವೃದ್ಧಿಯು ಕೇವಲ ಪುಸ್ತಕದ ಬದನೆಕಾಯಿ ಆಗುತ್ತಿದೆಯೇ ಹೊರತು ಸಮುದಾಯದ ಅಭಿವೃದ್ಧಿಗೆ ಉಪಯೋಗವಾಗುತ್ತಿಲ್ಲ. ಕಳೆದ ೭೦ ವರ್ಷಗಳಿಂದ ದೇಶದಲ್ಲಿ ವಾರ್ಷಿಕ ಸಾವಿರಾರು ಕೋಟಿ ಆದಿವಾಸಿಗಳ ಅಭಿವೃದ್ಧಿಗಾಗಿ ಸರ್ಕಾರಗಳು ವ್ಯಯಿಸಲಾಗುತ್ತಿದೆ. ವಿಪರ್ಯಾಸ ವೆಂದರೆ ಆ ಸಮುದಾಯದ ಅಭಿವೃದ್ಧಿಯೆಂಬುವುದೇ ಆಗಿಲ್ಲ ಎಂದು ಆರೋಪಿಸಿದರು.
.ಆದಿವಾಸಿಗಳ ಸಮಸ್ಯೆಗಳನ್ನು ಅವರಿಂದಲೇ ತಿಳಿದು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಬದಲು ದೆಹಲಿ, ಬೆಂಗಳೂರಿನಲ್ಲಿ ಕುಳಿತು ಯೋಜನೆ ರೂಪಿಸುವ ಅವೈಜ್ಞಾನಿಕ ಕ್ರಮವನ್ನು ಸರ್ಕಾರಗಳು ಕೈ ಬಿಡಬೇಕು. ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಿಗಳು ಲೂಟಿ ಹೊಡೆಯುತ್ತಿ ರುವ ಆದಿವಾಸಿಗಳ ಹಣವನ್ನು ನೇರವಾಗಿ ಅವರ ಅಭಿವೃದ್ಧಿಗಾಗಿ ಬಳಕೆ ಆಗ ಬೇಕೆಂದು ಒತ್ತಾಯಿಸಿದರು.
ಬ್ರಿಟೀಷರ ಅರಣ್ಯಹಕ್ಕು ಕಾಯ್ದೆಯನ್ನು ಇಂದಿನ ಸರ್ಕಾರಗಳು ಅನುಸರಿಸುತ್ತಿರುವುದು ದುರಂತ. ಇದರಿಂದಾಗಿ ಕಾಡಿನ ಮಕ್ಕಳು ಎಂದು ಕರೆಸಿಕೊಳ್ಳುವ ಆದಿವಾಸಿಗಳು ತಮ್ಮ ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಶ್ರೇಣೀಕೃತ ಜಾತಿ ಪದ್ಧತಿಯು ಮತ್ತೊಂದು ಪಿಡುಗಾಗಿ ಸಮುದಾಯವನ್ನು ಕಾಡುತ್ತಿದೆ. ಶೈಕ್ಷಣಿಕವಾಗಿ ಸಮುದಾಯ ವನ್ನು ಮುಂದೆ ತರಬೇಕಾದರೆ ಕೇವಲ ಆಶ್ರಮ ಶಾಲೆಗಳನ್ನು ಪ್ರಾರಂಭಿಸಿದರೆ ಸಾಲದು ಗುಣಮಟ್ಟದ ಶಿಕ್ಷಕರ ನೇಮಕವೂ ಆಗಬೇಕಿದೆ. ಇಲ್ಲದೆ ಇದ್ದರೆ ಸಮುದಾಯದ ಶಿಕ್ಷಕರಿಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದಿವಾಸಿಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ವೈ.ಕೆ ಗಣೇಶ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ರಾಜೇಶ್ ಜಿ. ಗೌಡ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಎನ್.ಬಿ. ಚಂದ್ರಶೇಖರ್, ಶ್ರೀಧರ ನಾಡ, ಜೆ.ಆರ್. ಪ್ರೇಮ, ಎನ್ ಡಿ ಕುಟ್ಟಪ್ಪ, ಹೆಚ್ .ಬಿ ರಮೇಶ್,ಪಿ ಆರ್ ಭರತ್ ಮತ್ತಿತರರಿದ್ದರು.