ಗೋಣಿಕೊಪ್ಪಲು, ಜು. ೯: ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆ ರೈತರಲ್ಲಿ ಸಂತಸ ಮೂಡಿಸಿದೆ. ಇದರಿಂದಾಗಿ ರೈತರು ತಮ್ಮ ಭತ್ತದ ಗದ್ದೆಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭತ್ತದ ಕೃಷಿಯಲ್ಲಿ ಉತ್ತಮ ಬೆಳೆ ನಿರೀಕ್ಷೆ ಇಟ್ಟುಕೊಂಡಿರುವ ರೈತ ತನ್ನ ಭೂಮಿಯನ್ನು ಪಾಳುಬಿಡದೆ ಭತ್ತದ ನಾಟಿ ಮಾಡಲು ಭೂಮಿಯನ್ನು ಸಮತಟ್ಟುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ರೈತರು ಭತ್ತದ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದಂತೆಯೇ ರೈತನ ಸಹಾಯಕ್ಕಾಗಿ ನೂರಾರು ಕೊಕ್ಕರೆಗಳು ಭತ್ತದ ಗದ್ದೆಯಲ್ಲಿರುವ ಹುಳ ಹುಪ್ಪಟೆಗಳನ್ನು ತಿಂದು ರೈತನಿಗೆ ಅನುಕೂಲ ಮಾಡಿಕೊಡುತ್ತಿದೆ. ದಕ್ಷಿಣ ಕೊಡಗಿನ ಕಿರುಗೂರು ಬಳಿ ರೈತರು ಪ್ರತಿವರ್ಷ ತಮ್ಮ ಭತ್ತದ ಗದ್ದೆಗಳನ್ನು ಉಳುಮೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಾರೆ. ರೈತರು ತಮ್ಮ ಗದ್ದೆಗಳನ್ನು ಟ್ರಾö್ಯಕ್ಟರ್‌ಗಳ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಸುತ್ತಮುತ್ತಲಿನಲ್ಲಿರುವ ಕೊಕ್ಕರೆಗಳು ಈ ಭಾಗದಲ್ಲಿ ಆಗಮಿಸಿ ತಮಗೆ ಬೇಕಾದ ಆಹಾರಗಳನ್ನು ಹುಡುಕಿಕೊಂಡಿತಲ್ಲದೆ ರೈತರ ಭೂಮಿಯಲ್ಲಿ ಹುಳ ಉಪ್ಪಟೆಗಳು ಇಲ್ಲದಂತೆ ಮಾಡಿದವು.

ದಕ್ಷಿಣ ಕೊಡಗಿನ ವಿವಿಧ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯು ಕಡಿಮೆಯಾಗುತ್ತಿದ್ದಂತೆಯೆ ರೈತರು ತಮ್ಮ ಗದ್ದೆಗಳಿಗೆ ಕೃಷಿ ಪರಿಕರಗಳೊಂದಿಗೆ ತೆರಳಿ ಕೆಲಸ ಆರಂಭಿಸಿದರು. ಬೀಸುತ್ತಿರುವ ಗಾಳಿಯ ನಡುವೆ ರೈತ ಭತ್ತದ ಕೃಷಿಗೆ ಬೇಕಾದ ಚಟುವಟಿಕೆಗಳನ್ನು ಆರಂಭಿಸಿದ್ದಾನೆ. ಭತ್ತ ಕೃಷಿಕರು ಸಹಜವಾಗಿ ಜೂನ್ ಕೊನೆ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಭತ್ತ ಸಸಿ ನಾಟಿ ಮಾಡಲು ಸಸಿ ಮಡಿಗಾಗಿ ಬೀಜ ಬಿತ್ತನೆ ಮಾಡುತ್ತಾರೆ. ನಂತರ ನಾಟಿ ಕಾರ್ಯಕ್ಕೆ ಕಾರ್ಮಿಕರು ಇಲ್ಲವೆ ಆಧುನಿಕ ತಂತ್ರಜ್ಞಾನದ ಮೂಲಕ ಯಂತ್ರೋಪಕರಣಗಳಿAದ ನಾಟಿ ಕಾರ್ಯ ಆರಂಭಿಸುತ್ತಾರೆ.

- ಹೆಚ್.ಕೆ. ಜಗದೀಶ್