ಕೂಡಿಗೆ, ಜು. ೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಶನಿವಾರ ೧೫,೫೦೦ ಕ್ಯೂಸೆಕ್ಸ್ ನೀರು ನದಿಗೆ ಹರಿಸಲಾಗುತ್ತಿದೆ.

ಹಾರಂಗಿಗೆ ಒಳ ಹರಿವಿನ ಪ್ರಮಾಣವು ಸ್ವಲ್ಪ ಕಡಿಮೆಯಾದರೂ ಸಹ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ನವರ ಸೂಚನೆಯಂತೆ ಇಂದು ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸಲಾಗುತ್ತಿದೆ. ಹಾರಂಗಿ ಜಲಾನಯನ ಪ್ರದೇಶಗಳಾದ ಮಾದಾಪುರ, ಹಟ್ಟಿಹೊಳೆ, ಜಂಬೂರು, ಗರ್ವಾಲೆ, ಸೂರ್ಲಬ್ಬಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಗಂಟೆ ಗಂಟೆಗೆ ನೀರಿನ ಪ್ರಮಾಣದಲ್ಲಿ ಹೆಚ್ಚುವರಿ ಆಗುತ್ತಿರುವ ಮಾಹಿತಿಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಪಡೆಯಲಾಗುತ್ತಿದ್ದು ಅದರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನದಿಗೆ ಹೆಚ್ಚುವರಿ ನೀರನ್ನು ಬಿಡಲು ಸೂಚನೆ ನೀಡಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಶಾಸಕರ ಸೂಚನೆಯಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಅಣೆಕಟ್ಟೆಯ ನೀರಿನ ಸಮ ಮಟ್ಟವನ್ನು ಕಾಯ್ದಿರಿಸಿಕೊಂಡು ನೀರನ್ನು ನದಿಗೆ ಹರಿಸಲಾಗುತ್ತಿದೆ.

ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ನೀರು ಬರುತ್ತಿರುವುದರಿಂದ ಕೂಡಿಗೆಯ ಹತ್ತಿರ ಹಾರಂಗಿ ಮತ್ತು ಕಾವೇರಿ ನದಿ ಸಂಗಮದ ಬಳಿ ಸಂಗಮವಾಗಿ ನಂತರ ಇಬ್ಬಾಗದ ರೀತಿಯಲ್ಲಿ ನದಿಯ ನೀರು ಹರಿದು ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಹತ್ತಿರದ ಸಣ್ಣ ಕಟ್ಟಿಗೆ ಹೊಡೆದು ನೀರು ಮಿಶ್ರವಾಗುವ ಮೂಲಕ ನೀರು ಹರಿಯುವ ದೃಶ್ಯ ಮನಮೋಹಕವಾಗಿರುತ್ತದೆ. ಆದರೆ ಕಣಿವೆಯ ರಾಮಲಿಂಗೇಶ್ವರ ದೇವಾಲಯ ಎದುರು ನಿರ್ಮಿಸಲಾಗಿರುವ ತೂಗುಸೇತುವೆಯು ದುರಸ್ತಿಗೆ ಒಳಗಾಗಿದ್ದರೂ ಸಹ ನೂರಾರು ಪ್ರವಾಸಿಗರು ತೂಗು ಸೇತುವೆ ಮೇಲೆ ನಿಂತು ಕಾವೇರಿ ನದಿಯ ವೀಕ್ಷಣೆ ಮಾಡುತ್ತಿದ್ದಾರೆ.