ಗೋಣಿಕೊಪ್ಪಲು, ಜು.೯: ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ದೈಯ್ಯದಡ್ಲು ಹಾಡಿಯಲ್ಲಿರುವ ಪಿ.ಎನ್.ತಮ್ಮಯ್ಯ ಎಂಬವರ ಮನೆಗೆ ಸಂಜೆ ೪.೩೦ರ ಸಮಯದಲ್ಲಿ ಪತ್ನಿ ಆಶಾ ಮನೆಯಲ್ಲಿದ್ದ ವೇಳೆ ಸಮೀಪದಲ್ಲಿದ್ದ ಮರವೊಂದು ಬಿದ್ದ ಘಟನೆ ನಡೆದಿದೆ.

ಈ ವೇಳೆ ಮನೆಗೆ ಹಂಚು ಜೋಡಿಸಲು ಹಾಕಲಾಗಿದ್ದ ಭಾರೀ ಗಾತ್ರದ ಮರವು ತುಂಡಾಗಿ ಬಿದ್ದಿದ್ದು, ಮನೆಯಲ್ಲಿದ್ದ ಆಶಾ ಅವರ ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ. ಕೂಡಲೇ ಅವರನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯ ಒಂದು ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಪಿಠೋಪಕರಣಗಳು ಹಾಗೂ ಇತರ ಸಾಮಾಗ್ರಿಗಳು ಹಾಳಾಗಿವೆ.

ಸುದ್ದಿ ತಿಳಿದ ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕರಾದ ಅನಿಲ್ ಹಾಗೂ ಗ್ರಾಮ ಲೆಕ್ಕಿಗರಾದ ಮುತ್ತಪ್ಪ ಅರಣ್ಯ ಇಲಾಖಾ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸದಸ್ಯರಾದ ಅರುಣ್ ಕುಮಾರ್, ರಾಜು, ವೈ.ಪಿ.ಕಾಳಮ್ಮ ಹಾಗೂ ಪಿ.ಕೆ.ಸಿದ್ದಪ್ಪ ಸ್ಥಳಕ್ಕೆ ತೆರಳಿ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು. ಕೂಡಲೇ ಮಳೆ ಪರಿಹಾರದಡಿ ಪರಿಹಾರ ವಿತರಿಸಲು ಸೂಚನೆ ನೀಡಿದರು. ಈ ವೇಳೆ ಗ್ರಾಮಸ್ಥರು, ಅಧಿಕಾರಿಗಳು ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ಹಾಜರಿದ್ದರು. -ಹೆಚ್.ಕೆ.ಜಗದೀಶ್