ಕೊಲಂಬೊ, ಜು. ೯: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಉದ್ವಿಗ್ನತೆಯನ್ನು ಸೃಷ್ಟಿಸಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಯರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ಬೀದಿಗಿಳಿದ ಪ್ರತಿಭಟನಾಕಾರರು ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿದ ಘಟನೆ ನಡೆದಿದೆ. ಪ್ರತಿಭಟನಾಕಾರರು ನುಗ್ಗುವುದನ್ನು ತಡೆಯಲು ಭದ್ರತಾಪಡೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಸಂದರ್ಭ ೩೦ ಮಂದಿಗೆ ಗಾಯಗಳಾಗಿವೆ. ಗೋಟಬಯ ರಾಜಪಕ್ಸೆ ಪ್ರತಿಭಟನಾಕಾರರ ಆಕ್ರೋಶದ ನಡುವೆಯೆ ಪಲಾಯನಗೈದಿದ್ದಾರೆ. ಇಂದು ಸರ್ಕಾರದ ವಿರುದ್ಧ ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಲ್ಲಿ ಯೋಜಿತ ಪ್ರತಿಭಟನೆಗೆ ಮುನ್ನ ದೇಶದ ಏಳು ವಲಯಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಶ್ರೀಲಂಕಾ ಪೊಲೀಸರು ತೆಗೆದುಹಾಕಿದ್ದರ ಮಧ್ಯೆ ಈ ಘಟನೆ ನಡೆದಿದೆ. ಸರ್ಕಾರದ ವಿರುದ್ಧ ಉನ್ನತ ವಕೀಲರ ಸಂಘ, ಮಾನವ ಹಕ್ಕುಗಳ ಸಂಘಟನೆ ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾವು, ವಿದೇಶಿ ಕರೆನ್ಸಿ ಕೊರತೆಯಿಂದಾಗಿ ಅಗತ್ಯ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ತತ್ತರಿಸುತ್ತಿದೆ. ಆಹಾರ ಮತ್ತು ಇಂಧನ ಕೊರತೆ ಭೀಕರವಾಗಿ ಕಾಡುತ್ತಿದೆ. ಅಗತ್ಯ ವೈದ್ಯಕೀಯ ಸಲಕರಣೆ, ಔಷಧಗಳ ಕೊರತೆಯೂ ಉಂಟಾಗಿದೆ. ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವ ಪರಿಸ್ಥಿತಿ ಸಹ ಇದೆ. ರಾಜಧಾನಿ ಕೊಲಂಬೊದಲ್ಲಿ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಸೇರಿದ್ದು, ಪರಿಸ್ಥಿತಿ ಅನಿಯಂತ್ರಿತ ವಾಗಿದೆ. ಪೊಲೀಸ್ ಇಲಾಖೆಯ ಮುಖ್ಯಸ್ಥರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಪ್ರತಿಪಕ್ಷಗಳ ನಾಯಕರು, ಹಕ್ಕುಗಳ ಹೋರಾಟಗಾರರು ಮತ್ತು ಬಾರ್ ಅಸೋಸಿಯೇಶನ್ ಸದಸ್ಯರು ಎಚ್ಚರಿಸಿದ ಬಳಿಕ ಶುಕ್ರವಾರ ಕರ್ಫ್ಯೂ ಹಿಂಪಡೆಯಲಾಗಿತ್ತು. ಆದರೆ, ಮನೆಯಲ್ಲೇ ಇರುವಂತೆ ನೀಡಿದ್ದ ಆದೇಶವನ್ನು ಧಿಕ್ಕರಿಸಿರುವ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಗೆ ಸನತ್ ಜಯಸೂರ್ಯ ಸಾಥ್
ಶ್ರೀಲಂಕಾ ಅಧ್ಯಕ್ಷ ಗೋಟಬಯ ವಿರುದ್ಧದ ಪ್ರತಿಭಟನೆಯಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಪಾಲ್ಗೊಂಡಿದ್ದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿರುದ್ಧ ಧ್ವನಿ ಎತ್ತಿದ್ದು, ಹಾಲಿ ಆಂದೋಲನಕ್ಕೆ ಬೆಂಬಲ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, 'ವಿಫಲ ನಾಯಕನನ್ನು ಹೊರಹಾಕಲು ದೇಶವು ಈ ರೀತಿ ಒಂದಾಗಿರುವುದನ್ನು ನಾನು ನೋಡಿಲ್ಲ. ಶ್ರೀಲಂಕಾದ ಜನರೊಂದಿಗೆ ನಾನು ಯಾವಾಗಲೂ ನಿಲ್ಲುತ್ತೇನೆ. ಜನರು ಶೀಘ್ರದಲ್ಲೇ
(ಮೊದಲ ಪುಟದಿಂದ) ವಿಜಯೋತ್ಸವ ಆಚರಿಸುತ್ತಾರೆ. ಆದರೆ ಇದು ಯಾವುದೇ ಕಾನೂನು ಉಲ್ಲಂಘನೆಯಾಗದAತೆ ಮುಂದುವರಿಯಬೇಕು ಎಂದು ಹೇಳಿದರು.
ಜಯಸೂರ್ಯ ಮಾತ್ರವಲ್ಲದೇ ಶ್ರೀಲಂಕಾದ ಮಾಜಿ ವಿಕೆಟ್ ಕೀಪಿಂಗ್ ಶ್ರೇಷ್ಠ ಕುಮಾರ ಸಂಗಕ್ಕಾರ ಮತ್ತು ಬ್ಯಾಟಿಂಗ್ ಲೆಜೆಂಡ್ ಮಹೇಲಾ ಜಯವರ್ಧನೆ ಅವರುಗಳು ಕೂಡ ರಾಜಪಕ್ಸೆ ವಿರುದ್ಧ ಧ್ವನಿ ಎತ್ತಿದ್ದಾರೆ ಮತ್ತು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ
ಅಧ್ಯಕ್ಷ ಗೋಟಬಯ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ ನೀಡಿದ್ದಾರೆ. ರಾಜಕೀಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸರ್ವಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ವಿಕ್ರಮ ಸಿಂಘೆ ತಿಳಿಸಿದ್ದಾರೆ.