ಪೆರಾಜೆ, ಜು. 7: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಬಾರಿ ಭೂಮಿ ಕಂಪನವಾದರೂ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪಿ. ಪೆರಾಜೆಯ ಅಮೆಚೂರು ಬೆಟ್ಟದಪುರ ಮತ್ತು ಸುತ್ತಮುತ್ತಲಿನ ಗಣಿಗಾರಿಕೆಯಿಂದ ಪರಿಸರಕ್ಕೆ ವ್ಯಾಪಕ ಹಾನಿಯಾಗಿದ್ದರ ಪರಿಣಾಮ ಇಂದು ಕಂಪನ ಸಂಭವಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಿ ಮುಂದೆ ಸಂಭವಿಸುವ ಅಪಾಯವನ್ನು ತಡೆಯದೆ ಹೋದಲ್ಲಿ ನಾವು ಮುಂದೆ ಬರುವ ಯಾವುದೇ ಚುನಾವಣೆಗಳಲ್ಲಿ ಮತದಾನವನ್ನು ಮಾಡದೆ ಇರಲು ನಿರ್ಧರಿಸಿದ್ದೇವೆ ಎಂದು ಬೆಟ್ಟದಪುರದ ಸ್ಥಳೀಯ ನಿವಾಸಿಗಳು ಮತ್ತು ಪಿ. ಪೆರಾಜೆಯ ಗ್ರಾಮಸ್ಥರು ಎಂಬ ಹೆಸರಿನಲ್ಲಿ ಬ್ಯಾನರ್ ಅಳವಡಿಸಿರುವುದು ಕಂಡುಬಂದಿದೆ.