ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಿಂದ ಭಾರತದಲ್ಲಿ ‘ಸೇವಕ ವರ್ಗ' ಸೃಷ್ಟಿ
ವಾರಣಾಸಿ, ಜು. 7: ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ‘ಸೇವಕ ವರ್ಗ’ವನ್ನು ರಚಿಸಿಕೊಳ್ಳಲು ದೇಶಕ್ಕೆ ಶಿಕ್ಷಣ ವ್ಯವಸ್ಥೆಯನ್ನು ನೀಡಿದ್ದು, ಅದರಲ್ಲಿ ಬಹಳಷ್ಟು ಇನ್ನೂ ಬದಲಾಗದೆ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನದ ಕುರಿತು ವಾರಣಾಸಿಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ವ್ಯವಸ್ಥೆಯು ಕೇವಲ ಪದವಿ ಹೊಂದಿರುವವರನ್ನು ಉತ್ಪಾದಿಸಬಾರದು. ದೇಶವನ್ನು ಮುನ್ನಡೆಸಲು ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸಬೇಕು. ದೇಶದಲ್ಲಿ ಸೃಷ್ಟಿಯಾದ ಶಿಕ್ಷಣ ವ್ಯವಸ್ಥೆಯ ಉದ್ದೇಶ ಕೇವಲ ಉದ್ಯೋಗ ನೀಡುವುದಾಗಿದೆ ಎಂದರು. ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಲು ಸೇವಕ ವರ್ಗವನ್ನು ತಯಾರಿಸಲು ಈ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿದರು. ಸ್ವಾತಂತ್ರ್ಯದ ನಂತರ ಅದರಲ್ಲಿ ಕೆಲವು ಬದಲಾವಣೆಗಳಾದವು. ಆದರೆ ಬಹಳಷ್ಟು ಬದಲಾವಣೆಯಾಗದೆ ಉಳಿದಿವೆ. ನಾವು ಕೇವಲ ಪದವಿ ಹೊಂದಿರುವ ಯುವಕರನ್ನು ಉತ್ಪಾದಿಸಬಾರದು. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ರಚಿಸುವಂತೆ ಮಾಡಬೇಕು. ನಾವು ಸವಾಲುಗಳು ಮತ್ತು ಸಮಸ್ಯೆಗಳ ವಿವರಗಳನ್ನು ಪರಿಶೀಲಿಸಬೇಕು ಮತ್ತು ಪರಿಹಾರಗಳನ್ನು ಕಂಡುಕೊಳ್ಳಬೇಕು. ಭಾರತೀಯ ಭಾಷೆಗಳಲ್ಲಿ ಶಿಕ್ಷಣಕ್ಕಾಗಿ ಬಾಗಿಲು ತೆರೆಯುತ್ತಿದೆ. ಭಾರತವು ವಿಶ್ವ ಶಿಕ್ಷಣ ತಾಣವಾಗಿ ಹೊರಹೊಮ್ಮಬಹುದು ಎಂಬ ವಿಶ್ವಾಸವಿದೆ. "ಅಖಿಲ ಭಾರತೀಯ ಶಿಕ್ಷಾ ಸಮಾಗಮ್" ಎಂಬ ಶೃಂಗಸಭೆಯಲ್ಲಿ "ನವೀನ ಚಿಂತನೆಗಳು ಮತ್ತು ಹೊಸ ಆಲೋಚನೆಗಳನ್ನು ಚರ್ಚಿಸಬೇಕು. ಎನ್ಇಪಿ 2020 ಅನುಷ್ಠಾನದ ಕುರಿತು ಚರ್ಚಿಸಲು ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ನಿರ್ದೇಶಕರು ಸೇರಿದಂತೆ 300ಕ್ಕೂ ಹೆಚ್ಚು ಶಿಕ್ಷಣತಜ್ಞರನ್ನು ಸಭೆಯು ಒಟ್ಟುಗೂಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತ-ಚೀನಾ ಸಂಬಂಧ ಮೂರು ಪರಸ್ಪರ ವಿಷಯಗಳನ್ನು ಆಧರಿಸಿರಬೇಕು
ನವದೆಹಲಿ, ಜು. 7: ಪೂರ್ವ ಲಡಾಕ್ನಲ್ಲಿ ಗಡಿ ವಾಸ್ತವ ರೇಖೆಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಆದಷ್ಟು ಶೀಘ್ರವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ವಿದೇಶಾಂಗ ಇಲಾಖೆ ಸಚಿವ ಎಸ್. ಜೈಶಂಕರ್ ಗುರುವಾರ ತನ್ನ ಸಹವರ್ತಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರಿಗೆ ಮನವರಿಕೆ ಮಾಡಿದ್ದಾರೆ. ಪರಸ್ಪರ ಗೌರವ, ಪರಸ್ಪರ ಸಂವೇದನೆ ಮತ್ತು ಪರಸ್ಪರ ಆಸಕ್ತಿ ಈ ಮೂರು ವಿಷಯಗಳಿಂದ ಮಾತ್ರ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಸಾಧ್ಯ ಮತ್ತು ಈ ಮೂರು ವಿಷಯಗಳನ್ನು ಆಧರಿಸಿಕೊಂಡಿದೆ ಎಂಬದನ್ನು ಕೂಡ ವಿದೇಶಾಂಗ ಸಚಿವರು ಪ್ರತಿಪಾದಿಸಿದ್ದಾರೆ. ಜಿ20 ರಾಷ್ಟ್ರಗಳ ವಿದೇಶಾಂಗ ಇಲಾಖೆ ಸಚಿವರುಗಳ ಸಭೆಯ ಹೊರಗೆ ಬಾಲಿಯಲ್ಲಿ ನಡೆದ ಮಾತುಕತೆಯಲ್ಲಿ ಭಾರತ-ಚೀನಾ ಗಡಿಭಾಗದ ಸಮಸ್ಯೆಯನ್ನು ಬಗೆಹರಿಸಲು ಮುಂದಿನ ಸುತ್ತಿನ ಮಿಲಿಟರಿ ಹಂತದ ಮಾತುಕತೆಯನ್ನು ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜೈಶಂಕರ್ ಅವರು ಚೀನಾಕ್ಕೆ ಭಾರತೀಯ ವಿದ್ಯಾರ್ಥಿಗಳ ಮರಳುವಿಕೆ ಮತ್ತು ಉಭಯ ದೇಶಗಳ ನಡುವೆ ನೇರ ವಿಮಾನಯಾನ ಪುನರಾರಂಭದ ವಿಷಯದ ಬಗ್ಗೆ ವಾಂಗ್ ಅವರೊಂದಿಗೆ ಚರ್ಚಿಸಿದರು. ಗಡಿ ಸಮಸ್ಯೆಗಳ ಮೇಲಿನ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜೈಶಂಕರ್ ಅವರು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಉಭಯ ದೇಶಗಳು ದ್ವಿಪಕ್ಷೀಯ ಶಿಷ್ಠಾಚಾರಗಳನ್ನು ಪಾಲಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ.
ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಭಾರತ ಮೂಲದ ರಿಷಿ ಸುನಕ್ ಪ್ರತಿಸ್ಪರ್ಧಿ
ಲಂಡನ್, ಜು. 7: ಅತೀವ ರಾಜಕೀಯ ಬಿಕ್ಕಟ್ಟು ಹಾಗೂ ಸಚಿವರ ಸರಣಿ ರಾಜೀನಾಮೆ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದು, ಮುಂದಿನ ಪ್ರಧಾನಿ ಹುದ್ದೆ ರೇಸ್ನಲ್ಲಿ ಭಾರತ ಮೂಲದ ರಿಷಿ ಸುನಕ್ ಸೇರಿದಂತೆ ಹಲವರ ಹೆಸರು ಮುಂಚೂಣಿಯಲ್ಲಿದೆ. ಅಕ್ಟೋಬರ್ನಲ್ಲಿ ನಿಗದಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಮಾವೇಶದ ವೇಳೆಗೆ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ 58 ವರ್ಷದ ಜಾನ್ಸನ್ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಔಪಚಾರಿಕವಾಗಿ ಘೋಷಿಸುವ ನಿರೀಕ್ಷೆಯಿದ್ದು, ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜಾನ್ಸನ್ ರಾಜೀನಾಮೆ ಬೆನ್ನಲ್ಲೇ ಹಲವು ಪ್ರಮುಖ ಸಂಭಾವ್ಯ ಉತ್ತರಾಧಿಕಾರಿಗಳನ್ನು ಸೂಚಿಸಲಾಗಿದೆ ಯಾದರೂ, ಯಾವುದೇ ಸ್ಪಷ್ಟವಾದ ಹೆಸರುಗಳು ಅಂತಿಮವಾಗಿಲ್ಲ. ಬ್ರಿಟನ್ನ ಮೊದಲ ಹಿಂದೂ ವೈಸ್ ಚಾನ್ಸಿಲರ್ ಆಗಿದ್ದ ರಿಷಿ ಸುನಕ್ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರಾಗಿದೆ. ಖಾಸಗಿ ಸಂಪತ್ತು ಮತ್ತು ಕುಟುಂಬದ ತೆರಿಗೆ ವ್ಯವಸ್ಥೆ ವಿವಾದ ವಿಚಾರವಾಗಿ ರಿಷಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದಾರೆ. 42 ವರ್ಷದ ಸುನಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಉನ್ನತ ಪೆÇ್ರಫೈಲ್ ಹೊಂದಿದ್ದಾರೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯನ್ನು ಹೆಚ್ಚಿಸಿದ್ದಕ್ಕಾಗಿ ಪ್ರಶಂಸೆಯನ್ನು ಗಳಿಸಿದ್ದಾರೆ. ಆದರೆ ಹೆಚ್ಚುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನ ಕುರಿತ ನಿರ್ಣಯಗಳ ವಿಚಾರದಲ್ಲಿ ಅವರು ನಿಲುವು ಅವರ ಜನಪ್ರಿಯತೆಯನ್ನು ಘಾಸಿಗೊಳಿಸಿದೆ ಎನ್ನಲಾಗಿದೆ.
ಮೂರು ಖಾಸಗಿ ಬ್ಯಾಂಕ್ಗಳ ಸಾಗರೋತ್ತರ ವ್ಯವಹಾರಕ್ಕೆ ರಕ್ಷಣಾ ಸಚಿವಾಲಯ ಅನುಮತಿ
ನವದೆಹಲಿ, ಜು. 7: ರಕ್ಷಣಾ ಸಚಿವಾಲಯವು ಗುರುವಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮೂರು ಖಾಸಗಿ ವಲಯದ ಬ್ಯಾಂಕ್ಗಳಾದ ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ಗಳಿಗೆ ಸಾಲ ಪತ್ರಗಳನ್ನು ನೀಡಲು ಮತ್ತು ಸಚಿವಾಲಯವು ಮಾಡಿದ ಸಾಗರೋತ್ತರ ಖರೀದಿಗಳಿಗೆ ಸಂಬಂಧಿಸಿದಂತೆ ನೇರ ಬ್ಯಾಂಕ್ ವರ್ಗಾವಣೆಗೆ ಅನುಮತಿ ನೀಡಿದೆ. ಈ ಮೂರು ಬ್ಯಾಂಕ್ಗಳೊಂದಿಗೆ ಇತ್ತೀಚೆಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದುವರೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮಾತ್ರ ಈ ಸೇವೆ ನೀಡುತ್ತಿದ್ದವು. ಈಗ ಮೊದಲ ಬಾರಿಗೆ, ಮೂರು ಖಾಸಗಿ ವಲಯದ ಬ್ಯಾಂಕ್ಗಳಿಗೆ ರಕ್ಷಣಾ ಸಚಿವಾಲಯವು ವಿದೇಶಿ ಖರೀದಿಗಳಿಗೆ ಹಣಕಾಸು ಸೇವೆಗಳನ್ನು ಒದಗಿಸಲು ಅನುಮತಿ ನೀಡಿದೆ. ಆಯ್ದ ಬ್ಯಾಂಕ್ಗಳು ಒಂದು ವರ್ಷದ ಅವಧಿಗೆ(ಬಂಡವಾಳ ಮತ್ತು ಆದಾಯ ಎರಡರ ಅಡಿಯಲ್ಲಿ ಪ್ರತಿ ಬ್ಯಾಂಕ್ಗೆ 666 ಕೋಟಿ ರೂ) ಬಂಡವಾಳ ಮತ್ತು ಆದಾಯದ ಕಡೆಯಿಂದ 2000 ಕೋಟಿ ಮೌಲ್ಯದ ಸಾಲ ಪತ್ರಗಳನ್ನು ಏಕಕಾಲೀನ ಆಧಾರದ ಮೇಲೆ ವಿತರಿಸಲು ಅನುಮತಿ ನೀಡಬಹುದು. ಅಗತ್ಯ ಬಿದ್ದರೆ ಮುಂದಿನ ಕ್ರಮ ಕೈಗೊಳ್ಳಲು ಈ ಬ್ಯಾಂಕ್ಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಗುಡ್ಡ ಕುಸಿದು ಮೂವರು ಕಾರ್ಮಿಕರ ದುರ್ಮರಣ
ಬಂಟ್ವಾಳ, ಜು. 7: ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೇಲ್ಯಪಲ್ಕೆ ಪಕ್ಕದ ಮುಕ್ಕುಡ ಬಳಿ ಕಳೆದ ರಾತ್ರಿ ಭೂಕುಸಿತ ಉಂಟಾಗಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಸತತ ಮಳೆಯಿಂದಾಗಿ ಮನೆಯೊಂದರ ಮೇಲೆ ಮಣ್ಣು ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರು ಕೇರಳ ಮೂಲದ ಕಾರ್ಮಿಕರಾಗಿದ್ದಾರೆ. ಗುಡ್ಡ ಕುಸಿದು ಸ್ಥಳೀಯ ನಿವಾಸಿ ಹೆನ್ರಿ ಕಾರ್ಲೋ ಎಂಬುವವರ ಮನೆ ಮೇಲೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಒಟ್ಟು ಐದು ದಿನಗೂಲಿ ಕಾರ್ಮಿಕರು ಶೆಡ್ನಲ್ಲಿ ವಾಸಿಸುತ್ತಿದ್ದರು. ಒಬ್ಬ ದೂರದಲ್ಲಿದ್ದುದರಿಂದ ಪಾರಾಗಿದ್ದಾನೆ. ರಾತ್ರಿ ಸುಮಾರು 8.45ರ ವೇಳೆಗೆ ಈ ಘಟನೆ ಸಂಭವಿಸಿದೆ. ಕೂಡಲೇ ಜೆಸಿಬಿ ಅಗೆಯುವ ಯಂತ್ರ ಬಳಸಿ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸಮಯಕ್ಕೆ ಸರಿಯಾಗಿ ಮೂವರನ್ನು ಅವಶೇಷಗಳಡಿಯಿಂದ ತೆಗೆಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರನ್ನು ಬಿಜು ಪಾಲಕ್ಕಾಡ್, (45), ಬಾಬು ಕೊಟ್ಟಾಯಂ, (46) ಮತ್ತು ಸಂತೋಷ್ ಅಲಪುಝಾ, (46) ಎಂದು ಗುರುತಿಸಲಾಗಿದೆ. ಏತನ್ಮಧ್ಯೆ, ಜಾನಿ ಕಣ್ಣೂರು ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.