ಕುಶಾಲನಗರ, ಜು. ೫: ಜಿಲ್ಲೆಯಲ್ಲಿ ಮಳೆಗಾಲ ಹಿನ್ನೆಲೆಯಲ್ಲಿ ಎದುರಾಗಬಹುದಾದ ವಿವಿಧ ರೀತಿಯ ಸಂಭಾವ್ಯ ಅಪಾಯಗಳನ್ನು ಮೊದಲೇ ಗುರುತಿಸಿ ಅತ್ಯಂತ ವ್ಯವಸ್ಥಿತವಾದ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿ ಸದಾ ಸನ್ನದ್ಧವಾಗಿರುವುದು ಅತಿ ಅಗತ್ಯವಾಗಿದೆ ಎಂದು ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಹೇಳಿದರು.

ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಅಗ್ನಿಶಾಮಕ ಇಲಾಖೆ ವತಿಯಿಂದ ಕೂಡಿಗೆ ಕೃಷಿ ತರಬೇತಿ ಕೇಂದ್ರದಲ್ಲಿ ಸ್ವಯಂ ಸೇವಕರಿಗೆ ಏರ್ಪಡಿಸಿದ್ದ ವಿಪತ್ತು ಮಿತ್ರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತ ಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಸ್ವಯಂ ಸೇವಕರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಪೂರ್ವಸಿದ್ಧತೆ ಪ್ರಕ್ರಿಯೆ ಪರಿಹಾರಕ್ಕೂ ಅತಿ ಮುಖ್ಯ ಎಂದು ತಿಳಿಸಿದರು. ಮೈಸೂರು ಪ್ರಾಂತ್ಯದ ಅಗ್ನಿಶಾಮಕ ಅಧಿಕಾರಿ ಪಿ.ಎಸ್.ಜಯರಾಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಪತ್ತು ನಿರ್ವಹಣೆಗೆ ಎರಡು ನೂರು ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತಿದೆ. ವಿಪತ್ತುಗಳು ಸಂಭವಿಸಿದಾಗ ವಿಪತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ, ಯೋಜನೆ, ನುರಿತ ರಕ್ಷಣಾ, ಚಿಕಿತ್ಸಾ ತಂಡಗಳು ಇರಬೇಕಾಗಿದೆ. ಕೊಡಗು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮಾತನಾಡಿ,

ಪ್ರತಿಯೊಂದಕ್ಕೂ ಪೂರ್ವ ಸಿದ್ಧತೆ ಅತ್ಯಂತ ಮುಖ್ಯ. ಈಗ ಸಾಕಷ್ಟು ತಾಂತ್ರಿಕ ಪ್ರಗತಿ ಹೊಂದಿದ್ದು ಅದನ್ನು ಬಳಸಿ ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ ಅಧ್ಯಯನ ಮಾಡಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೇಗೆ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಪೂರ್ವಸಿದ್ಧತೆ ಪ್ರಕ್ರಿಯೆಯೊಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಚಾಲಕ ಅನನ್ಯ ವಾಸುದೇವ್, ಮಂಡ್ಯ ಜಿಲ್ಲೆಯ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್, ಪಿರಿಯಾಪಟ್ಟಣ ಅಗ್ನಿಶಾಮಕ ಠಾಣಾಧಿಕಾರಿ ಅಜಯ್ ಕುಮಾರ್, ದಾವಣಗೆರೆ ಜಿಲ್ಲೆಯ ಚನ್ನಗಿರಿ ಠಾಣಾಧಿಕಾರಿ ಎಚ್.ಬಿ. ಸಂತೋಷ್, ಜಗಳೂರು ಅಗ್ನಿಶಾಮಕ ಠಾಣಾಧಿಕಾರಿ ಆರ್.ಹನುಮಂತರಾಯ ಹಾಗೂ ಕುಶಾಲನಗರ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಪ್ರಶಾಂತ್, ಸಂದೀಪ್, ಶಂಕರ್ ಮತ್ತಿತರರು ಇದ್ದರು. ೧೨ ದಿನಗಳ ಕಾಲ ನಡೆಯುವ ೨ನೇ ಹಂತದ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ೨೦೦ ಸ್ವಯಂ ಸೇವಕರು ಭಾಗವಹಿಸಿದ್ದರು.