ಪೊನ್ನಂಪೇಟೆ, ಜು.೫ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ವಲಯದ ಅರ್ವತೋಕ್ಲು ಕಾರ್ಯಕ್ಷೇತ್ರದ, ೪೧ ಪ್ರಗತಿಬಂಧು ಸ್ವಸಹಾಯ ಸಂಘಗಳ ೧೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾ.ಪಂ. ಮಾಜಿ ಸದಸ್ಯ ಕೋಳೇರ ದಯಾ ಚಂಗಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮುದಾಯಕ್ಕಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸ್ವಸಹಾಯ ಸಂಘಗಳ ಮೂಲಕ ಹಲವರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಸಮಾಜ ಸೇವಕ ಸುಬ್ರಮಣ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಪುರೇಷೆಗಳು ಮತ್ತು ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಕ್ರಮಗಳಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ದಿನೇಶ್ ಮಾತನಾಡಿ ಸಿಎಸ್‌ಸಿ ಕಾರ್ಯಕ್ರಮ, ಜೀವ ವಿಮೆ ಹಾಗೂ ಇನ್ನಿತರ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಅರ್ವತೋಕ್ಲು ಕಾರ್ಯಕ್ಷೇತ್ರದ ೪೧ ಗುಂಪುಗಳ ಸದಸ್ಯರು ಸಂಘಕ್ಕೆ ಸೇರಿದ ನಂತರ ೨೦೦೯ ನೇ ಇಸವಿಯಿಂದ ಇಲ್ಲಿಯವರೆಗೆ ತಮ್ಮ ಕುಟುಂಬದಲ್ಲಿ ಅಭಿವೃದ್ಧಿಯಾಗಿರುವ ಬಗ್ಗೆ ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯ ಗಳನ್ನು ಹಂಚಿಕೆಗೊಳ್ಳುವುದರ ಜೊತೆಗೆ, ಮುಂದಿನ ಪೀಳಿಗೆಗೆ ಸ್ವ ಸಹಾಯ ಸಂಘಗಳನ್ನು ಗುಣಮಟ್ಟದಲ್ಲಿ ನಡೆಸಿಕೊಂಡು ಹೋಗಲು ಸಲಹೆ ನೀಡಿದರು.

ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ದೃಶ್ಯ, ಲಾವಣ್ಯ, ಮಿಲಿ ಹಾಗೂ ಜೋಶೆಪ್ ನಿಶ್ಚಲ್ ಮತ್ತು ಪತ್ರಕರ್ತ ಎಂ.ಎA.ಚನ್ನನಾಯಕ ಅವರನ್ನು ಸನ್ಮಾನಿಸಲಾಯಿತು.

ಅರ್ವತೋಕ್ಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೋಹಿಣಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಗಣೇಶ್, ಪೊನ್ನಂಪೇಟೆ ಗ್ರಾ.ಪಂ.ಸದಸ್ಯ ರಾಮಕೃಷ್ಣ, ಸಮಾಜ ಸೇವಕ ಸುರೇಶ್ ರೈ, ಒಕ್ಕೂಟದ ಪದಾಧಿಕಾರಿಗಳಾದ ರೇವತಿ, ಶೋಭಾ, ಮೀರಾ, ಗಿರಿಜಾ ಹಾಜರಿದ್ದರು. ರೇವತಿ ಸ್ವಾಗತಿಸಿದರೆ, ವಲಯ ಮೇಲ್ವಿಚಾರಕ ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.