ಕಣಿವೆ, ಜು.೫ : ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿರುವ ಗುಂಡೂರಾವ್ ಬಡಾವಣೆ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯ ತುಂಬೆಲ್ಲಾ ಗುಂಡಿಗಳು ನಿರ್ಮಾಣಗೊಂಡಿವೆ. ಗುಂಡಿಯಾಗಿರುವ ಈ ರಸ್ತೆಯಲ್ಲಿ ಮಳೆಯ ನೀರು ನಿಂತು ಜನ ಹಾಗೂ ವಾಹನ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಒಂದು ಗುಂಡಿ ತಪ್ಪಿಸಲು ಹೋದರೆ ಮೂರು ಗುಂಡಿಗಳು ಎದುರಾಗುತ್ತಿದ್ದು ವಾಹನ ಚಾಲಕರು ಹರಸಾಹಸ ಪಡುತ್ತಿದ್ದಾರೆ.

ಕುಶಾಲನಗರದ ಪುರ ಪ್ರಮುಖರಾಗಿದ್ದ ದಿ.ಗುಂಡೂರಾವ್ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅಭಿವೃದ್ಧಿಯ ಕನಸು ಕಂಡ ಕುಶಾಲನಗರದಲ್ಲಿ ಗುಂಡೂರಾವ್ ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ಬಡಾವಣೆಯಲ್ಲಿ ಇದ್ದ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಕೂಡ ಆಡಳಿತ ಏಕೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಇಲ್ಲಿನ ನಿವಾಸಿಗಳು ಆಡಳಿತ ಪ್ರಮುಖರನ್ನು ಪ್ರಶ್ನಿಸುತ್ತಿದ್ದಾರೆ.

ಕಿತ್ತು ನಿಂತ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು. ಕೊನೆ ಪಕ್ಷ ಮಳೆಗಾಲ ಮುಗಿವವರೆಗೆ ತಾತ್ಕಾಲಿಕವಾಗಿಯಾದರು ಗುಂಡಿ ಮುಚ್ಚಬೇಕು ಎಂದು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತವನ್ನು ಸ್ಥಳೀಯರು ಆಗ್ರಹಿಸಿದ್ದಾರೆ. ರಸ್ತೆಯಷ್ಟೇ ಅಲ್ಲ, ಈ ಬಡಾವಣೆಯಲ್ಲಿ ನಿರ್ಮಿಸಿರುವ ಉದ್ಯಾನವನ ಕಾಮಗಾರಿ ಅಪೂರ್ಣಗೊಂಡಿದೆ. ಕೂಡಲೇ ಈ ರಸ್ತೆಯ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ವಿಶೇಷ ಯೋಜನೆ ರೂಪಿಸಬೇಕೆಂದು ಇಲ್ಲಿನ ಮಂದಿ ಆಗ್ರಹಿಸಿದ್ದಾರೆ.

(ವರದಿ : ಕೆ.ಎಸ್. ಮೂರ್ತಿ )