ಕಣಿವೆ, ಜು. ೫ : ಇಲ್ಲಿನ ಕಾವೇರಿ ನದಿಯಲ್ಲಿ ಜನರ ಸಂಚಾರಕ್ಕೆ ಕಳೆದ ಎರಡು ದಶಕಗಳ ಹಿಂದೆ ಸ್ಥಳೀಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಕೊಡಮಾಡಿದ್ದ ದೋಣಿ ಯೊಂದು ಅನಾಥವಾಗಿದೆ. ಕಣಿವೆಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯ ಮುಂಬದಿಯ ನದಿಯೊಳಗಿನ ಪುರಾತನ ಕಾಲದ ಮರವೊಂದರ ಬುಡಕ್ಕೆ ಈ ದೋಣಿಯನ್ನು ಕಟ್ಟಿ ನಿಲ್ಲಿಸಲಾಗಿದೆ.

ನದಿಯಲ್ಲಿ ಅದೆಷ್ಟೇ ಪ್ರವಾಹ ಬಂದರೂ ಕೂಡ ಈ ದೋಣಿ ಕೊಚ್ಚಿ ಹೋಗಲೇ ಇಲ್ಲ ಅಥವಾ ತೇಲಿಯೂ ಹೋಗಲಿಲ್ಲ. ದೇವಾಲಯದ ಆವರಣದಲ್ಲಿ ತೂಗು ಸೇತುವೆ ನಿರ್ಮಾಣಕ್ಕೂ ಮುನ್ನಾ ಮೈಸೂರು ಹಾಗೂ ಕೊಡಗು ಗಡಿ ಗ್ರಾಮಗಳ ಜನರ ಸಂಚಾರಕ್ಕೆ ಆಸರೆಯಾಗಿದ್ದ ಹಳೆಯ ದೋಣಿ ಹಾಳಾಗಿದ್ದರಿಂದ ಬದಲೀ ವ್ಯವಸ್ಥೆಯಿಂದಾಗಿ ಇಲ್ಲಿ ಈ ದೋಣಿಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಖರೀದಿಸಿ ನೀಡಲಾಗಿತ್ತು. ಆದರೆ ಈ ದೋಣಿಯನ್ನು ನಡೆಸುವ ಅಂಬಿಗನಿಲ್ಲದ ಕಾರಣ ಹಾಗೂ ಕಾಲ ಕ್ರಮೇಣ ಜನರು ದೋಣಿ ಸಂಚಾರಕ್ಕೆ ಹಿಂದೇಟು ಹಾಕಿದ್ದರಿಂದಾಗಿ ಇದು ಅತಂತ್ರವಾಯ್ತು.

ಹಾಗಾಗಿ ಈ ದೋಣಿಯನ್ನು ಹಾಳಾಗುವ ಮುನ್ನ ಅಗತ್ಯವಿರುವ ಕಡೆಗೆ ಅನಿವಾರ್ಯದ ಮಂದಿಗೆ ನೀಡಲಿ ಎಂಬುದು ಕೆಲವರ ವಾದ. ಈ ಬಗ್ಗೆ ದೇವಾಲಯ ಆಡಳಿತ ಸಮಿತಿ ಸೂಕ್ತ ತೀರ್ಮಾನಕ್ಕೆ ಬಂದರೆ ಒಳ್ಳೆಯದು ಎಂಬುದು ಸ್ಥಳೀಯರ ಅಂಬೋಣವಾಗಿದೆ.