ಮಡಿಕೇರಿ, ಜು. ೩: ಕೊಡಗು ಜಿಲ್ಲೆಯಾದ್ಯಂತ ಆರ್ದ್ರಾ ಮಳೆ ಪ್ರಸ್ತುತ ಒಂದಷ್ಟು ಹೆಚ್ಚು ಅಬ್ಬರ ತೋರುತ್ತಿದೆ. ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕೆಲವಾರು ಸಮಸ್ಯೆಗಳನ್ನೂ ಜನರು ಅನುಭವಿಸು ವಂತಾಗಿದೆ. ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದ್ದರೆ, ಭಾಗಮಂಡಲ - ನಾಪೋಕ್ಲು ರಸ್ತೆ ಜಲಾವೃತಗೊಂಡಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಹಲವೆಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ಇದರೊಂದಿಗೆ ಬರೆಜರಿತದಂತಹ ಪ್ರಸಂಗಗಳೂ ನಡೆದಿವೆ. ಅಮ್ಮತ್ತಿ, ಮಾದಾಪುರ, ಗರಗಂದೂರು, ಕೂಡಿಗೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗಿದೆ. ಕಾವೇರಿ ನದಿ ಸೇರಿದಂತೆ ಇನ್ನಿತರ ನದಿಗಳ ವ್ಯಾಪ್ತಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ತೋಡು - ತೊರೆಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ನೈಜ ಮಳೆಗಾಲದ ಚಿತ್ರಣ ಕಂಡುಬರುತ್ತಿದೆ. ಹಾರಂಗಿ ಅಣೆಕಟ್ಟೆಯ ಮುಂಭಾಗದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕುಶಾಲನಗರ - ಸೋಮವಾರಪೇಟೆ ಸಂಪರ್ಕ ಕಡಿತಗೊಂಡಿದೆ. ಹಾರಂಗಿ ಅಣೆಕಟ್ಟೆಯಿಂದ ೧೫ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೪.೭೦ ಇಂಚು ಸರಾಸರಿ ಮಳೆ

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೬೪ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪.೭೦ ಇಂಚು ಮಳೆ, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ. ವೀರಾಜಪೇಟೆಯಲ್ಲಿ ೧.೨೨ ಇಂಚು ಹಾಗೂ ಸೋಮವಾರಪೇಟೆಯಲ್ಲಿ ೨ ಇಂಚು ಸರಾಸರಿ ಮಳೆಯಾಗಿದೆ.

ಭಾಗಮಂಡಲಕ್ಕೆ ೬.೪೦ ಇಂಚು

ಭಾಗಮAಡಲ ಹೋಬಳಿಯಲ್ಲಿ ೬.೪೦ ಇಂಚಿನಷ್ಟು ಭಾರೀ ಮಳೆಯಾಗಿದೆ. ಸಂಪಾಜೆಯಲ್ಲಿ ೫.೩೨, ನಾಪೋಕ್ಲು ೪ ಹಾಗೂ ಮಡಿಕೇರಿ ಕ.ಸ.ಬಾದಲ್ಲಿ ೩.೦೮ ಇಂಚಿನಷ್ಟು ಮಳೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ. ವೀರಾಜಪೇಟೆ ಹೋಬಳಿ ಯಲ್ಲಿ ೧.೬೬, ಸೋಮವಾರಪೇಟೆ ಹೋಬಳಿಯಲ್ಲಿ ೧.೪೮ ಇಂಚಿನಷ್ಟು ಮಳೆಯಾಗಿದೆ.ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಅಲ್ಲದೆ ಜಲಾಶಯದ ಮೇಲಿನ ಭಾಗದ ಪ್ರದೇಶಗಳಲ್ಲಿ ಅತಿಯಾದ ಮಳೆಯಿಂದಾಗಿ ಅಣೆಕಟ್ಟೆಗೆ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಅಣೆಕಟ್ಟೆಯಿಂದ ೧೫,೦೦೦ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇಂದು ಜಲಾನಯನ ಪ್ರದೇಶದ ಭಾಗಗಳಿಂದ ಅಣೆಕಟ್ಟೆಗೆ ೧೦,೦೦೦ ಕ್ಯೂಸೆಕ್ಸ್ ನೀರು ಬರುತ್ತಿದ್ದು, ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ನೀರಿನ ಮಟ್ಟವನ್ನು ಕಾಯ್ದಿರಿಸಿ ಹೆಚ್ಚುವರಿ ನೀರನ್ನು ಹಂತ ಹಂತವಾಗಿ ನದಿಗೆ ಹರಿಸಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಹಾರಂಗಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಅಣೆಕಟ್ಟೆಯಿಂದ ೧೫,೦೦೦ ಕ್ಯೂಸೆಕ್ಸ್ ನೀರನ್ನು ಕ್ರೇಸ್ಟ್ ಗೇಟ್ ಮೂಲಕ ಮತ್ತು ವಿದ್ಯುತ್ ಘಟಕ ಮೂಲಕ ಹರಿದ ಪರಿಣಾಮವಾಗಿ ಅಣೆಕಟ್ಟೆಯ ಮುಂಭಾಗದ ಕುಶಾಲನಗರ ಸೋಮವಾರಪೇಟೆಗೆ ತೆರಳುವ ಕಿರಿದಾದ ಸೇತುವೆಯ ನೀರಿನಿಂದ ಮುಳುಗಡೆಯಾಗಿದೆ. ಸೇತುವೆಯ ಮೇಲೆ ಯಾರು ತಿರುಗಾಡದ ರೀತಿ ಪೊಲೀಸರು ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಅದೇ ರೀತಿಯಲ್ಲಿ ನೀರಾವರಿ ಇಲಾಖೆಯ ವತಿಯಿಂದ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ದಂಡೆಯ ಪ್ರದೇಶದ ಜನರಿಗೆ ಸೂಚನೆ ನೀಡಲಾಗಿದೆ.

ಅಣೆಕಟ್ಟೆಗೆ ಹೆಚ್ಚುವರಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚನೆಯಂತೆ ನೀರಿನ ಏರಿಕೆಯ ಅನುಗುಣವಾಗಿ ನದಿಗೆ ಹರಿಸಲಾಗುತ್ತಿದೆ ಎಂದು ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಭಾಗಮಂಡಲ: ಭಾಗಮಂಡಲದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾಗಮಂಡಲ ನಾಪೋಕ್ಕು ರಸ್ತೆ ಸಂಚಾರ ಕಡಿತಗೊಂಡಿತ್ತು. ಎಡೆಬಿಡದೆ ಮಳೆ ಸುರಿದಿದ್ದು, ಭಾಗಮಂಡಲ - ನಾಪೋಕ್ಲು ರಸ್ತೆಯಲ್ಲಿ ಇಂದು ಬೆಳಿಗ್ಗೆ ಎರಡು ಅಡಿ ನೀರು ಹರಿಯುತ್ತಿತ್ತು ಇದರಿಂದಾಗಿ ಮಧ್ಯಾಹ್ನದವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬೆಳಿಗ್ಗೆ ಹತ್ತು ಗಂಟೆಯ ನಂತರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಾವೇರಿ ನದಿ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ನಿನ್ನೆ ಒಂದೇ ದಿನಕ್ಕೆ ತಲಕಾವೇರಿಯಲ್ಲಿ ೫.೫೦ ಇಂಚು ಮಳೆ ದಾಖಲಾಗಿದ್ದು, ಭಾಗಮಂಡಲದಲ್ಲಿ ಒಂದೇ ದಿನಕ್ಕೆ ೬.೪೦ ಇಂಚು ಮಳೆ ದಾಖಲಾಗಿದೆ. ಧಾರಾಕಾರ ಮಳೆಯಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸಮೀಪದ ಕೋರಂಗಾಲದ ವಾಜಪೇಯಿ ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದೆ. ದಿಢೀರ್ ರಜೆ ಘೋಷಿಸಿರುವುದರಿಂದ ದೂರದ ವಿದ್ಯಾರ್ಥಿಗಳಿಗೆ ಮನೆಗೆ ಹೋಗಿ ಬರಲು ಸಮಸ್ಯೆ ಉಂಟಾಗಿದೆ.

ಮಡಿಕೇರಿ: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ಮರಗಳು ಧರೆಗುರುಳಿವೆ. ಹಲವು ಮರಗಳು ನೀರಿನಲ್ಲಿ ಕೊಚ್ಚಿ ಬಂದು ಸೇತುವೆಗೆ ಅಡ್ಡಲಾಗಿ ಸಂಗ್ರಹವಾಗಿತ್ತು. ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಚೆಂಬು ಗ್ರಾ.ಪಂ ಸದಸ್ಯ ನಡುಮನೆ ವಸಂತ ಊರುಬೈಲು ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಮರಗಳನ್ನು ತೆರವುಗೊಳಿಸಿದರು. ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ವೇದಿಕೆಯ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜಿತ್ ಪಾಲ್ತಾಡು ಮತ್ತಿತರ ಪ್ರಮುಖರು ಹಾಜರಿದ್ದರು.ಮಡಿಕೇರಿ: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ಮರಗಳು ಧರೆಗುರುಳಿವೆ. ಹಲವು ಮರಗಳು ನೀರಿನಲ್ಲಿ ಕೊಚ್ಚಿ ಬಂದು ಸೇತುವೆಗೆ ಅಡ್ಡಲಾಗಿ ಸಂಗ್ರಹವಾಗಿತ್ತು. ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಚೆಂಬು ಗ್ರಾ.ಪಂ ಸದಸ್ಯ ನಡುಮನೆ ವಸಂತ ಊರುಬೈಲು ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಮರಗಳನ್ನು ತೆರವುಗೊಳಿಸಿದರು. ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ವೇದಿಕೆಯ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜಿತ್ ಪಾಲ್ತಾಡು ಮತ್ತಿತರ ಪ್ರಮುಖರು ಹಾಜರಿದ್ದರು.

ಭಾರೀ ಮಳೆಯಿಂದಾಗಿ ಕರಿಕೆಯಲ್ಲಿ ಬರೆ ಕುಸಿತ, ಮನೆಗೆ ಹಾನಿ ಘಟನೆಗಳು ಸಂಭವಿಸಿವೆ. ಗ್ರಾಮದ ಮನೆಯೊಂದರ ಬಳಿ, ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕಾಲೋನಿ ಬಳಿ ಬರೆ ಕುಸಿತಗೊಂಡಿದೆ. ಗಾಳಿ, ಮಳೆಗೆ ಕರಿಕೆಯ ಉಷಾಕುಮಾರಿ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಇಲ್ಲಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳ್ಳೂರು: ಕಳೆದ ೩ ದಿನಗಳಿಂದ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೋಬಳಿಯ ದುಂಡಳ್ಳಿ, ಗೌಡಳ್ಳಿ, ನಿಡ್ತ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ೩ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕೆರೆ, ಕೊಳಗಳು ಮಳೆಗೆ ನಿಧಾನವಾಗಿ ತುಂಬಿಕೊಳ್ಳುತ್ತಿವೆ. ಶನಿವಾರಸಂತೆ ವ್ಯಾಪ್ತಿಯಲ್ಲಿ ಜು೧ ರಿಂದ ೩ರವರೆಗೆ ಸರಾಸರಿ ೩.೫೨ ಇಂಚು ಮಳೆಯಾಗಿದೆ. ಭಾನುವಾರ ೧.೬೦ ಇಂಚು ಮಳೆಯಾಗಿದೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಏಪ್ರಿಲ್‌ನಿಂದ ಜು ೩ ಕ್ಕೆ ಸರಾಸರಿ ೧೮.೯೮ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ೧೫.೫೬ ಇಂಚು ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ೩ ಇಂಚು ಹೆಚ್ಚಿಗೆ ಮಳೆಯಾಗಿದೆ. ಭಾನುವಾರ ಬೆಳಿಗ್ಗೆ ಮಳೆ, ಗಾಳಿಗೆ ಶನಿವಾರಸಂತೆ, ಬಾಣಾವಾರ, ಕುಶಾಲನಗರ ಹೆದ್ದಾರಿಯ ಹುನಸೆಹೊಸಹಳ್ಳಿ ತಿರುವು ಬಳಿ ಭಾರೀ ಗಾತ್ರದ ಮರವೊಂದು ಬಿದ್ದು ಕೆಲವು ಗಂಟೆಗಳ ವರೆಗೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರಿಂದ ವಾಹನಗಳು ಬದಲಿ ರಸ್ತೆಯೊಂದರಲ್ಲಿ ಸಂಚರಿಸುವAತಾಯಿತು. ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದರು. ಸೋಮವಾರಪೇಟೆ: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ, ಗರ್ವಾಲೆ ಗ್ರಾಮಗಳಲ್ಲಿ ಕಳೆದ ೨೪ ಗಂಟೆಗಳಿAದ ಧಾರಾಕಾರ ಮಳೆ ಸುರಿಯುತ್ತಿದೆ.

ಹಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ಸೂರ್ಲಬ್ಬಿ ರಸ್ತೆಯಲ್ಲಿ ಅಪರಾಹ್ನ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯಲ್ಲಿ ಹೂತುಕೊಂಡಿದ್ದು, ಗ್ರಾಮಸ್ಥರು ಹರಸಾಹಸ ಮಾಡಿ ಬಸ್‌ನ್ನು ಎಳೆದರು. ಮಾದಾಪುರದಿಂದ ಹರಗ ತನಕ ರಸ್ತೆ ಕಿರಿದಾಗಿದೆ. ರಸ್ತೆ ಬದಿಯಲ್ಲಿ ಕಾಡು ಬೆಳೆದು ರಸ್ತೆ ಕಾಣದಂತಾಗಿದೆ. ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಇಂತಹ ಅಪಘಾತ ಸಂಭವಿಸುತ್ತಿರುತ್ತವೆ ಎಂದು ರೈತ ಸಂಘದ ಪ್ರಮುಖರಾದ ಜಯಂತಿ ಹೇಳಿದರು. ಶಾಂತಳ್ಳಿ ಚೇತನ್, ಗ್ರಾಮಸ್ಥರಾದ ಮನು, ಬಿದ್ದಪ್ಪ, ನಾಣಿಯಪ್ಪ, ಪೆಮ್ಮಯ್ಯ, ಪಾಪು ಮುಂತಾದವರು ಬಸ್ ಎಳೆಯುವುದಕ್ಕೆ ಸಹಕರಿಸಿದರು.ಮಡಿಕೇರಿ: ಭಾರೀ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿಕೇರಿಯ ಮಲ್ಲಿಕಾರ್ಜುನ ನಗರದ ಮನೆಯೊಂದು ಮಳೆಗೆ ಹಾನಿಯಾದ ಹಿನ್ನೆಲೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿದರು. ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಹಾಂಗೀರ್ ಪೈಸಾರಿಯ ಚಂದ್ರಶೇಖರ್ ಅವರ ಮನೆ ಬಳಿ ಬರೆ ಕುಸಿತ ಹಿನ್ನೆಲೆ ತಹಶೀಲ್ದಾರ್ ಮಹೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕೂಡಿಗೆ: ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸಿದ ಪರಿಣಾಮವಾಗಿ ಹಾರಂಗಿ ನದಿ ದಂಡೆಯ ಗ್ರಾಮಗಳಾದ ಹುದುಗೂರು, ಮಾವಿನಹಳ್ಳ ವ್ಯಾಪ್ತಿಯ ಕೆಲ ಪ್ರದೇಶದ ಜಮೀನಿಗೆ ನದಿಯ ನೀರು ನುಗ್ಗಿದ ಪರಿಣಾಮವಾಗಿ ಅಡಿಕೆ ತೋಟ ಸೇರಿದಂತೆ ಅನೇಕ ಗದ್ದೆಗಳು ಜಲಾವೃತಗೊಂಡಿವೆ.