ಪೊನ್ನಂಪೇಟೆ, ಜು. ೩: ರಾಜಕೀಯ ಒತ್ತಡಕ್ಕೆ ಮಣಿದಿರುವ ಕೊಡಗು ಜಿಲ್ಲಾಡಳಿತ ಬೇಕಾಬಿಟ್ಟಿ ಯಾಗಿ ಭೂ ಪರಿವರ್ತನೆಯನ್ನು ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರೂ ಆಗಿರುವ ಕರ್ನಾಟಕ ರಾಜ್ಯ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರು, ಜಿಲ್ಲಾಡಳಿತದ ಅವೈಜ್ಞಾನಿಕ ನೀತಿಯೇ ಕೊಡಗಿನಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳಿಗೆ ಮೂಲ ಕಾರಣ ಎಂದು ಕಿಡಿ ಕಾರಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇದೀಗ ಕೊಡಗಿನಲ್ಲಿ ಭೂ ಪರಿವರ್ತನೆ ಒಂದು ದಂಧೆಯಾಗಿ ಪರಿಣಮಿಸಿದೆ. ರೆಸಾರ್ಟ್ ಮತ್ತು ಬಡಾವಣೆಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯ ಭೂ ಪರಿವರ್ತನೆ ಯಥೇಚ್ಛವಾಗಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ತಮ್ಮ ಮನಸ್ಸಿಗೆ ಬಂದAತೆ ಭೂ ಪರಿವರ್ತನೆ ಕಡತ ಗಳಾಗಿ ಅಂಗೀಕಾರ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

೨೦೧೭ ಮತ್ತು ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಾಂತ್ರಿಕ ಪರಿಣಿತರ ಸಮಿತಿಯೊಂದನ್ನು ರಚಿಸಲಾಗಿತ್ತು. ನಿಯಮ ಪ್ರಕಾರ ಜಿಲ್ಲೆಯ ಯಾವುದೇ ಭಾಗದಲ್ಲಿ ಭೂ ಪರಿವರ್ತನೆಯಾಗಬೇಕಾದರೆ ತಾಂತ್ರಿಕ ಸಮಿತಿಯ ವರದಿ ಪಡೆಯಬೇಕಾಗಿದೆ. ಆದರೆ ಜಿಲ್ಲಾಡಳಿತ ತಾಂತ್ರಿಕ ಸಮಿತಿಯನ್ನು ಎಲ್ಲಿಯೂ ಗಣನೆಗೆ ತೆಗೆದುಕೊಳ್ಳದೆ ಭೂ ಪರಿವರ್ತನೆ ಮಾಡುತ್ತಿದೆ.

(ಮೊದಲ ಪುಟದಿಂದ) ಇದೀಗ ತಾಂತ್ರಿಕ ಸಮಿತಿ ಕೇವಲ ನಾಮಕಾವಸ್ಥೆಗೆ ಮಾತ್ರವಿದ್ದು, ಈ ಸಮಿತಿಯಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ಎ.ಎಸ್. ಪೊನ್ನಣ್ಣ ಆರೋಪಿಸಿದರು. ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯಬೇಕಿದ್ದ ಈ ಸಂದರ್ಭದಲ್ಲಿ ರಸಗೊಬ್ಬರದ ಕೊರತೆ ಕೃಷಿಕರನ್ನು ವ್ಯಾಪಕವಾಗಿ ಕಾಡುತ್ತಿದೆ. ಇಡೀ ರಾಜ್ಯದಲ್ಲಿ ಕಂಡುಬರುತ್ತಿರುವ ರಸಗೊಬ್ಬರ ಕೊರತೆ ಕಳೆದ ೭೦ ವರ್ಷಗಳಲ್ಲೇ ಇದು ಮೊದಲ ಬಾರಿಯಾಗಿದ್ದು, ಇದರಿಂದ ರೈತರು ತೀವ್ರವಾಗಿ ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಕಳಪೆ ಮಟ್ಟದ ರಸಗೊಬ್ಬರ ಕೇವಲ ಮಣ್ಣು ಮಿಶ್ರಿತವಾಗಿದ್ದು ಇದರಿಂದ ಕೃಷಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಿರ್ಲಕ್ಷವೇ ಗೊಬ್ಬರ ಕೊರತೆಗೆ ಕಾರಣ ಎಂದು ಹೇಳಿದ ಪೊನ್ನಣ್ಣ ಅವರು, ಇನ್ನಾದರೂ ಸರಕಾರ ರೈತರ ಬಗ್ಗೆ ವಿಶೇಷ ಗಮನ ಹರಿಸಲಿ ಎಂದು ಒತ್ತಾಯಿಸಿದರು.

ತನ್ನ ವ್ಯಾಪ್ತಿಯ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಕಟ್ಟಡ ನಿಯಂತ್ರಣ ರೇಖೆಯ ಕುರಿತು ಲೋಕೋಪಯೋಗಿ ಇಲಾಖೆಯು ಹೊಸದಾಗಿ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಹೆದ್ದಾರಿಯಲ್ಲಿ ೪೦ ಮೀ. ಮತ್ತು ಜಿಲ್ಲಾ ಮುಖ್ಯರಸ್ತೆಗೆ ೨೫ ಮೀ. ಅಂತರವನ್ನು ನಿಗದಿಪಡಿಸಿದೆ. ಯಾವುದೇ ಪರಿಹಾರದ ಮಾರ್ಗಸೂಚಿಯನ್ನು ಹೊರಡಿಸದೆ ಈ ರೀತಿಯ ಸುತ್ತೋಲೆ ಹೊರಡಿಸುವುದು ಜನವಿರೋಧಿ ನೀತಿಯಾಗಿದೆ. ಇದು ಜನರನ್ನು ಹೆಚ್ಚು ಆತಂಕಗೊಳಿಸಿದೆ. ಯಾವುದೇ ವೈಜ್ಞಾನಿಕ ಸಲಹೆ ಪಡೆಯದೆ ಮನಸ್ಸಿಗೆ ಬಂದAತೆ ಆದೇಶಗಳನ್ನು ಜಾರಿ ಮಾಡುತ್ತಾ ಜನರ ಭಾವನೆಯ ವಿರುದ್ಧ ವರ್ತಿಸುವುದು ಸರಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದ್ದು, ಕಟ್ಟಡ ನಿಯಂತ್ರಣ ರೇಖೆಯ ಜಾಗಕ್ಕಾಗಿ ಸೂಕ್ತ ಪರಿಹಾರ ಒದಗಿಸದಿದ್ದಲ್ಲಿ ಅದು ಸಂವಿಧಾನದ ೩೦೦ (ಎ) ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಪರಿಹಾರ ಮೊತ್ತದ ಕುರಿತು ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೀದೇರಿರ ನವೀನ್, ಕಾಂಗ್ರೆಸ್ ವಕ್ತಾರÀ ಎ.ಎಸ್. ಟಾಟು ಮೊಣ್ಣಪ್ಪ, ಪ್ರಮುಖರಾದ ತೆರೆಸಾ ವಿಕ್ಟರ್, ಕೊಲ್ಲಿರ ಬೋಪಣ್ಣ, ಮತ್ರಂಡ ದಿಲ್ಲು, ಕುಲ್ಲಚಂಡ ಪ್ರಮೋದ್ ಗಣಪತಿ ಹಾಗೂ ಜುನೈದ್ ಉಪಸ್ಥಿತರಿದ್ದರು.