ಮಡಿಕೇರಿ, ಜು. 2: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ತಾ. 9 ಮತ್ತು 10 ರಂದು ನೆಲ್ಲಿಹುದಿಕೇರಿಯಲ್ಲಿ "ಆದಿವಾಸಿಗಳ ಅಭಿವೃದ್ಧಿ- ಅವಲೋಕನ" ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಅಧ್ಯಯನ ಶಿಬಿರ ನಡೆಯಲಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ವೈ.ಕೆ. ಗಣೇಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂದಿನ ಸ್ಥಿತಿಗತಿಗಳ ಅವಲೋಕನ ನಡೆಸಿ ಪರಿಹಾರದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಎರಡು ದಿನಗಳ ಕಾಲ ಕಾಫಿಯಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ಆದಿವಾಸಿಗಳ ಬದುಕು ಮತ್ತು ಸಂಸ್ಕೃತಿ ಕುರಿತು ವಿಸ್ತಾರವಾಗಿ ಚರ್ಚಿಸಿ ಕ್ರಿಯಾಶೀಲ ಯೋಜನೆ ರೂಪಿಸುವುದು ಶಿಬಿರದ ಉದ್ದೇಶವಾಗಿದ್ದು, ಚಿಂತಕರು, ಬುಡಕಟ್ಟು ವಿದ್ವಾಂಸರು ಹಾಗೂ ಪ್ರತಿ ಜಿಲ್ಲೆಗಳ ಆದಿವಾಸಿ ಸಮುದಾಯದ 500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.