ಮಡಿಕೇರಿ, ಜು. 2: ಸೋಮವಾರಪೇಟೆ ತಾಲೂಕು ಮಾದ್ರೆ ಗ್ರಾಮದ ದಂಡಳ್ಳಿಯಲ್ಲಿ ಪರಿಶಿಷ್ಟರಿಗಾಗಿ ಮೀಸಲಿಟ್ಟಿರುವ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣ ತೆರವುಗೊಳಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ನಿವೇಶನ ರಹಿತರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ತಕ್ಷಣ ಒತ್ತುವರಿ ಜಾಗ ತೆರವುಗೊಳಿಸಿ ನಿವೇಶನ ರಹಿತ ಅರ್ಹ ಫಲಾನು ಭವಿಗಳಿಗೆ ಹಂಚಿಕೆ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಮಿತಿಯ ಜಿಲ್ಲಾ ಖಜಾಂಚಿ ಡಿ.ಎಸ್. ಕಾಂತರಾಜು, ಶನಿವಾರ ಸಂತೆ ಕಾರ್ಯಾಧ್ಯಕ್ಷ ಜಗದೀಶ್ ಕಿತ್ತೂರು, ಹೋಬಳಿ ಅಧ್ಯಕ್ಷ ಶಿವಲಿಂಗ, ಹಿರಿಯ ಮುಖಂಡ ಎಂ.ಸಿ. ಹೂವಣ್ಣ, ಮಾದ್ರೆ ಜೈ ಭೀಮ್ ಯುವಕ ಸಂಘದ ಅಧ್ಯಕ್ಷ ಎಂ.ಕೆ. ಮಂಜುನಾಥ್, ಪ್ರಮುಖರಾದ ರಾಣಿ ಮತ್ತಿತತರು ಹಾಜರಿದ್ದರು.