ಮಡಿಕೇರಿ, ಜು. 2: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅಭಿವೃದ್ಧಿ ಸಮಿತಿಯ ಮೊದಲ ಸಭೆ ಶಾಸಕ ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ತರಗತಿ ಕೊಠಡಿಗಳ ಕೊರತೆಯನ್ನು ನೀಗಿಸಲು ಮತ್ತು ಕಾಲೇಜಿನ ಅಮೃತ ಮಹೋತ್ಸವ ಆಚರಣೆಯ ಸವಿ ನೆನಪಿಗಾಗಿ ನೂತನ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರು ಸೂಚಿಸಿದರು.

ಕಾಲೇಜಿನಲ್ಲಿ ಜಾರಿಯಿರುವ ಕಡ್ಡಾಯ ಸಮವಸ್ತ್ರ ನೀತಿಯನ್ನು ಎಲ್ಲರೂ ಪಾಲಿಸಬೇಕೆಂದು ತೀರ್ಮಾನಿಸಲಾಯಿತು. ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ವಿವಿಧೋದ್ದೇಶ ಸಭಾಂಗಣ ಮತ್ತು ಹೊಸ ಉಪಹಾರ ಗೃಹ ನಿರ್ಮಾಣ ಮಾಡಲು ಶಾಸಕರ ಸಹಾಯ ಕೋರಲಾಯಿತು.

ಕಾಲೇಜಿನಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಅವಶ್ಯಕ ಸಮಯಗಳಲ್ಲಿ ಕರ್ನಾಟಕ ಸಾರಿಗೆ ಬಸ್‍ಗಳನ್ನು ಒದಗಿಸುವಂತೆ ಶಾಸಕರು ದೂರವಾಣಿ ಮುಖಾಂತರ ವ್ಯವಸ್ಥಾಪಕರಿಗೆ ಸೂಚಿಸಿದರು.

ಸಭೆಯಲ್ಲಿ ಮಂಜುನಾಥ್, ಡಾ. ಟಿ.ಡಿ. ತಿಮ್ಮಯ್ಯ, ಮಲಚೀರ ಕಾರ್ಯಪ್ಪ, ಸ್ಥಳೀಯ ವರ್ತಕ ರೆಜಿ, ಬಿ.ಕೆ. ಜಗದೀಶ್, ಕೈಗಾರಿ ಕೋದ್ಯಮಿಗಳಾದ ಕನ್ನಿಕೆ, ಸುಬ್ರಮಣ್ಯ ಹೊಳ್ಳ, ಪಿ.ಡಿ. ಪೊನ್ನಪ್ಪ, ಹಿಂದುಳಿದ ವರ್ಗಗಳ ಪ್ರತಿನಿಧಿಗಳಾಗಿ ಭರತ್, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ನಾಗರಾಜ್, ಆರೋಗ್ಯ ಅಧಿಕಾರಿ ಡಾ. ಚೇತನ್, ವಿದ್ಯಾರ್ಥಿ ಪ್ರತಿನಿಧಿ ತೃತೀಯ ವಾಣಿಜ್ಯ ವಿಭಾಗದ ಪೂಜಿತಾ ಪಿ.ಎಂ., ಸದಸ್ಯ ಕಾರ್ಯದರ್ಶಿಯಾಗಿ ಕಾಲೇಜಿನ ಪ್ರಾಂಶುಪಾಲ ಸಿ. ಜಗತ್ ತಿಮ್ಮಯ್ಯ ಅವರು ಭಾಗವಹಿಸಿದ್ದರು.