ಸಿದ್ದಾಪುರ, ಜೂ .೨೭: ಜಾನುವಾರುಗಳನ್ನು ಸಾಯಿಸುತ್ತಿದ್ದ ಹುಲಿಯು ಕಾರ್ಯಾಚರಣೆ ತಂಡಕ್ಕೆ ಕಾಣಸಿಗದೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಬಳಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ ಸಾಯಿಸುತ್ತಿರುವ ಘಟನೆಗಳಿಂದಾಗಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಕಳೆದ ೪ ದಿನಗಳಿಂದ ಕೂಂಬಿAಗ್ ನಡೆಸುತ್ತಿದ್ದಾರೆ.ಆದರೆ ಹುಲಿಯು ಕಾಣ ಸಿಗುತ್ತಿಲ್ಲ. ಆದರೂ ಕೂಡ ಅರಣ್ಯ ಇಲಾಖಾಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯಾಧಿಕಾರಿಗಳು ಹುಲಿ ಸೆರೆಗೆ ಸತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಹುಲಿ ಸೆರೆಗೆ ೩ ಬೋನ್ಗಳನ್ನು ಕಾಫಿ ತೋಟದ ಒಳಗೆ ಇರಿಸಲಾಗಿದೆ. ಈ ಮಧ್ಯೆ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ಮಾಡಲು ಕಾಡಾನೆಗಳಿಂದ ಸಮಸ್ಯೆ ಎದುರಾಗುತ್ತಿದೆ. ಆದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ದಿನನಿತ್ಯ ಬೆಳಗ್ಗಿನಿಂದ ಸಂಜೆಯವರೆಗೆ ಬಾಡಗ ಬಾಣಂಗಾಲ ಗ್ರಾಮದ ಸುತ್ತಮುತ್ತಲ ಕಾಫಿ ತೋಟ ಹಾಗೂ ಪೊದೆಗಳ ಒಳಗೆ ಕೂಂಬಿAಗ್ ನಡೆಸುತ್ತಿದ್ದಾರೆ. ಆದರೂ ಪತ್ತೆಯಾಗದ ಹುಲಿಯಿಂದಾಗಿ ಇಲಾಖಾಧಿಕಾರಿಗಳಿಗೆ ತಲೆ ನೋವಾಗಿದೆ ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ. -ವಾಸು