ವೀರಾಜಪೇಟೆ, ಜೂ. ೨೫: ಗಿರಿಜನ ವಾಸಿಗಳಿಗೆ ನಡೆದಾಡಲು ಉಪಯುಕ್ತವಾಗುವ ಕಬ್ಬಿಣದ ಹಳಿಗಳಿಂದ ನಿರ್ಮಾಣ ಮಾಡಿರುವ ರೈಲಿಂಗ್ ಇಂದು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
‘ಹೆಲ್ತ್ ಅಂಡ್ ಎನ್‌ವಿರಾನ್‌ಮೆಂಟ್ ಇಂಡಿಯ’ ಸಂಸ್ಥೆಯ ವತಿಯಿಂದ ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಭಾಗವಾದ ಮಾಕುಟ್ಟ ಗಿರಿಜನ ಕಾಲೋನಿಯಲ್ಲಿ ನೂತನವಾಗಿ ಹಳಿಗಳಿಂದ ನಿರ್ಮಿತವಾದ ತಡೆ ಕಂಬವನ್ನು (ರೈಲಿಂಗ್) ಸಂಸ್ಥೆಯ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಮುತ್ತಣ್ಣ ಅವರು ಪ್ರಕೃತಿ ರಮಣೀಯವಾದ ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಗಿರಿಜನರು ಮುಗ್ಧರು. ಈ ಹಿನ್ನೆಲೆ ಸಂಸ್ಥೆಯು ಹೊಗೆ ರಹಿತ ಅಡುಗೆ ಒಲೆ, ಸೋಲಾರ್ ದೀಪ, ಕಂಬಳಿ ಮತ್ತು ಕೋವಿಡ್ ಸಂದರ್ಭದಲ್ಲಿ ಸತತ ಮೂರು ತಿಂಗಳು ಆಹಾರ ಪದಾರ್ಥಗಳನ್ನು ಗಿರಿಜನರಿಗೆ ನೀಡಲಾಗಿದೆ. ನೀಡಿರುವ ವಸ್ತುಗಳು ಸದ್ಬಳಕೆಯಾಗಬೇಕು. ಅರಣ್ಯ ರಕ್ಷಣೆಯೇ ಧ್ಯೇಯವಾಕ್ಯದಂತೆ ಪ್ರಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮವಹಿಸಬೇಕು ಎಂದರು.
ಮಾಕುಟ್ಟ ವಲಯ ಡಿ.ಆರ್.ಎಫ್.ಓ ಚಂದ್ರಶೇಖರ್ ಮಹದೇವ ಹುರಳಿ ಮಾತನಾಡಿ ಗಿರಿಜನ ಕಾಲೋನಿಯಲ್ಲಿ ಸರ್ಕಾರದ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದರು. ಮಳೆಗಾಲದಲ್ಲಿ ರಸ್ತೆಯ ಮೇಲೆ ಪಾಚಿಕಟ್ಟಿ ನಡೆದಾಡಲು ಅನಾನುಕೂಲವಾಗಿತ್ತು. ಇದನ್ನು ಮನಗಂಡ ‘ಹೆಲ್ತ್ ಅಂಡ್ ಎನ್‌ವಿರಾನ್‌ಮೆಂಟ್ ಇಂಡಿಯ’ ಸಂಸ್ಥೆ ರೈಲಿಂಗ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದ ಇಲ್ಲಿನ ವಾಸಿಗಳಿಗೆ ಉಪಯುಕ್ತವಾಗಿದೆ ಎಂದರು.
ರೈಲಿAಗ್ ಉದ್ಘಾಟನೆ ಸಂದರ್ಭ ‘ಹೆಲ್ತ್ ಅಂಡ್ ಎನ್‌ವಿರಾನ್‌ಮೆಂಟ್ ಇಂಡಿಯ’ ಸಂಸ್ಥೆ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಸಹ ಸಂಚಾಲಕ ಬಲ್ಲಚಂಡ ರಾಯ್ ಬೋಪಣ್ಣ ಮತ್ತು ಅರಣ್ಯ ವೀಕ್ಷಕರಾದ ನವೀನ್, ಕಾಲೋನಿಯ ಹಿರಿಯರಾದ ಜಾನು ಮತ್ತು ಕಾಲೋನಿಯ ಹಿರಿಯರಾದ ಜಾನು ಮತ್ತು ಕಾಲೋನಿಯ ವಾಸಿಗಳು ಹಾಜರಿದ್ದರು.