ಗೋಣಿಕೊಪ್ಪಲು, ಜೂ.೨೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯು ಮಳೆಗಾಲದಲ್ಲಿ ಕಡಿತಗೊಳ್ಳುವ ಆತಂಕ ಎದುರಾಗಿದೆ. ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆಗೆ ಹೊಂದಿಕೊAಡAತಿರುವ ಬೈಪಾಸ್ ರಸ್ತೆಯ ಕೈ ತೋಡುವಿನಲ್ಲಿ ಭಾರೀ ಗಾತ್ರದ ಮಣ್ಣು ಕುಸಿಯುತ್ತಿದ್ದು ಈ ರಸ್ತೆ ಬದಿಯಲ್ಲಿದ್ದ ತಾತ್ಕಾಲಿಕ ವಾಹನ ನಿಲ್ದಾಣವು ಸ್ಥಳಾಂತರ ಗೊಂಡಿದೆ.

ಕಳೆದ ಆರು ತಿಂಗಳ ಹಿಂದೆ ನಗರದ ಬೈ ಪಾಸ್ ರಸ್ತೆಯ ಕೈ ತೋಡನ್ನು ಒತ್ತುವರಿ ಮಾಡಿ ಕೊಂಡಿದ್ದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಸಮ್ಮುಖದಲ್ಲಿ ಕೆಲವು ಭಾಗಗಳನ್ನು ಜೆಸಿಬಿಯ ಮೂಲಕ ತೆರವುಗೊಳಿಸಲಾಗಿತ್ತು. ಈ ವೇಳೆ ಸೇತುವೆ ಸಮೀಪವಿರುವ ರಸ್ತೆಗೆ ಹೊಂದಿಕೊAಡಿದ್ದ ಕೈ ತೋಡನ್ನು ಶುಚಿಗೊಳಿಸಲಾಗಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಸಣ್ಣ ಪ್ರಮಾಣದಲ್ಲಿ ಕುಸಿಯುತ್ತಿದ್ದ ರಸ್ತೆಯ ಒಂದು ಭಾಗವು ಇದೀಗ ನೀರಿನ ಹರಿವು ಅಧಿಕಗೊಳ್ಳುತ್ತಿದ್ದಂತೆಯೆ ತೋಡುವಿನ ಒಂದು ಬದಿ ಸಂಪೂರ್ಣ ಕುಸಿಯಲಾರಂಭಿಸಿದೆ.

ಕುಸಿಯುತ್ತಿರುವ ಭಾಗದಲ್ಲಿ ತಡೆಗೋಡೆ ನಿರ್ಮಾಣಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸುರಿಯುವ ಭಾರೀ ಮಳೆಯ ನೀರು ಈ ಕೈ ತೋಡಿನಲ್ಲಿ ಹರಿಯುವ ಕಾರಣ ರಸ್ತೆಯ ಭಾಗವು ಕುಸಿಯುವ ಸಂಭವ ಹೆಚ್ಚಾಗಿದೆ. ಒಂದು ವೇಳೆ ಈ ರಸ್ತೆಯ ಕುಸಿತ ಹೆಚ್ಚಾದಲ್ಲಿ ಪ್ರಮುಖ ಸಂಪರ್ಕ ರಸ್ತೆಯು ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಪೊನ್ನಂಪೇಟೆ ಭಾಗದಿಂದ ವೀರಾಜಪೇಟೆಗೆ ತೆರಳುವ ಬಹುತೇಕ ವಾಹನಗಳು ಬೈಪಾಸ್ ರಸ್ತೆಯನ್ನೇ ಅವಲಂಬಿಸಿದ್ದು ಇದೇ ಮಾರ್ಗದಲ್ಲಿ ಹೆಚ್ಚಾಗಿ ಸಂಚರಿಸುತ್ತಿವೆ. ಅಲ್ಲದೆ ಪಟ್ಟಣದಲ್ಲಿ ಏಕಮುಖ ಸಂಚಾರವಿರುವುದರಿAದ ಈ ಬೈಪಾಸ್ ರಸ್ತೆಯನ್ನೇ ವಾಹನ ಸವಾರರು ಅವಲಂಬಿಸಬೇಕಾಗಿದೆ. ಇದರಿಂದ ಕೂಡಲೇ ಬೈಪಾಸ್‌ರಸ್ತೆಯ ಸೇತುವೆ ಬಳಿ ಕೈ ತೋಡಿಗೆ ತಡೆಗೋಡೆ ನಿರ್ಮಿಸಿ ಮುಂದಾಗುವ ಅಪಾಯವನ್ನು ತಪ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

-ಹೆಚ್.ಕೆ.ಜಗದೀಶ್