ಪಾಲಿಬೆಟ್ಟ / ಸಿದ್ದಾಪುರ, ಜೂ ೨೩: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಪಾಲಿಬೆಟ್ಟ ಭಾಗದಲ್ಲಿ ಇದೀಗ ಹುಲಿಯೊಂದು ಜಾನುವಾರಿನ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಪಾಲಿಬೆಟ್ಟದ ದುಬಾರೆ ಚೆಟ್ಟಿನಾಡು ಪ್ಲಾಂಟೇಶನ್ ತೋಟದಲ್ಲಿ ನಡೆದಿದೆ. ಪಾಲಿಬೆಟ್ಟದ ದುಬಾರೆ ಕಾಫಿ ತೋಟದ ಒಳಗೆ ಹುಲಿಯೊಂದು ದನದ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿ ಸಾಯಿಸಿದ್ದು, ಅರ್ಧ ಭಾಗದಷ್ಟು ತಿಂದಿದೆ. ಗುರುವಾರ ಬೆಳಿಗ್ಗೆ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ ಸಂದರ್ಭ ದನ ಸತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತೋಟದ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹುಲಿ ದಾಳಿ ಮಾಡಿರುವುದು ಖಚಿತಗೊಂಡಿದೆ. ಈ ಭಾಗದ ಕಾಫಿ ತೋಟಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕಾಡು ದನಗಳು ಬೀಡು ಬಿಟ್ಟಿರುವುದು ಕಂಡು ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಮೆರಾ ಅಳವಡಿಕೆ : ಹುಲಿ ಜಾನುವಾರನ್ನು ಸಾಯಿಸಿದ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಹುಲಿಯ ಚಲನ-ವಲನಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳಲ್ಲಿ ಹುಲಿಯ ಚಿತ್ರ ಸೆರೆಯಾದ ಬಳಿಕ ಹುಲಿಯನ್ನು ಸೆರೆ ಹಿಡಿಯಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಕೂಂಬಿAಗ್ ನಡೆಸಲಾಗುವುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಗನ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗುವುದೆಂದು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ತಿಳಿಸಿದ್ದಾರೆ. ವನ್ಯಪ್ರಾಣಿ ಹಾವಳಿ ತಡೆಗೆ ಸೂಕ್ತಕ್ರಮ ವಹಿಸಬೇಕೆಂದು ಗ್ರಾ.ಪಂ. ಸದಸ್ಯೆ ಲಕ್ಷಿö್ಮ ಆಗ್ರಹಿಸಿದ್ದಾರೆ. ಸ್ಥಳಕ್ಕೆ ವೀರಾಜಪೇಟೆ ಡಿಸಿಎಫ್ ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ರೋಶಿಣಿ, ವಲಯ ಅರಣ್ಯಾಧಿಕಾರಿ ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು.

ವರದಿ: ವಾಸು ಎ.ಎನ್./ ಪುತ್ತಂ ಪ್ರದೀಪ್