ಮಡಿಕೇರಿ, ಜೂ. ೨೩: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿಗೆ ಸೇರಿದ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಕೃಷಿಗೆ ಯೋಗ್ಯವಾದ ಜಮೀನು ಖರೀದಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ನೀಡುವ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಹಾಗೂ ಜಮೀನು ಮಾರಾಟ ಮಾಡಲು ಇಚ್ಚಿಸುವ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರನ್ನು ಹೊರತುಪಡಿಸಿ, ಇತರೆ ಜನಾಂಗದ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಭೂ ಒಡೆತನ ಯೋಜನೆಯಡಿ ಭೂ ಮಾಲೀಕರು ನೀಡಬೇಕಾದ ದಾಖಲಾತಿಯ ವಿವರ ಇಂತಿದೆ. ಭೂ ಮಾಲೀಕರ ಜಾತಿ ಪ್ರಮಾಣ ಪತ್ರ ಹಾಗೂ ಭಾವಚಿತ್ರ, ಪಹಣಿ ೩ ವರ್ಷದ್ದು, ಜಮಾಬಂದಿ, ವಂಶವೃಕ್ಷ, ಚೆಕ್ಕು ಬಂದಿ, ಮ್ಯುಟೇಷನ್ (ಹಕ್ಕು ಬದಲಾವಣೆ), ಆರ್.ಆರ್.೫ ಮತ್ತು ೬, ಕಂದಾಯ ರಶೀದಿ, ಕ್ರಯ ಪತ್ರದ ನಕಲು, ಪಿತ್ರಾರ್ಜಿತವಾದಲ್ಲಿ ಸಂಬAಧಪಟ್ಟ ಎಲ್ಲಾ ಸದಸ್ಯರ ಒಪ್ಪಿಗೆ ಪತ್ರ, ಬ್ಯಾಂಕು ಹಾಗೂ ಸೊಸೈಟಿಯಿಂದ ಸಾಲವಿಲ್ಲದ ದೃಡೀಕರಣ ಪತ್ರ, ಋಣಭಾರ ಪತ್ರ (೧೩ ವರ್ಷದ್ದು), ೧೧ ಇ ನಕ್ಷೆ ನೀಡಬೇಕು.

ಭೂ ಒಡೆತನ ಯೋಜನೆಯಡಿ ಫಲಾಪೇಕ್ಷಿಯು ನೀಡಬೇಕಾದ ದಾಖಲಾತಿಯ ವಿವರ: ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗ್ರಾಮ ಸಭೆಯ ಆಯ್ಕೆ ಪತ್ರ, ಕೃಷಿ ಕಾರ್ಮಿಕರ ಪತ್ರ, ಆಧಾರ್‌ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಪುಸ್ತಕ ಜೆರಾಕ್ಸ್.

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಭೂ ರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳಾ ಅಭ್ಯರ್ಥಿ ಆಗಿರಬೇಕು. ಅರ್ಜಿದಾರರು ೨೧ ವರ್ಷದಿಂದ ೫೦ ವರ್ಷದವರೆಗಿನ ವಯೋಮಾನ ದವರಾಗಿರಬೇಕು. ಅರ್ಜಿದಾರರು ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ ಅರೆ ಸರ್ಕಾರಿ ನೌಕರಿಯಲ್ಲಿರ ಬಾರದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.೯೮ ಸಾವಿರ ಗ್ರಾಮೀಣ ಹಾಗೂ ರೂ.೧.೨೦ ಲಕ್ಷ ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಭೂಮಿ ಮಾರಾಟ ಮಾಡಲು ಇಚ್ಚಿಸುವ ಭೂ ಮಾಲೀಕರು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿರಬಾರದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧ ದೂ.ಸಂ. ೦೮೨೭೨-೨೨೮೮೫೭ ನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಜುಲೈ, ೧೫ ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.