ಗೋಣಿಕೊಪ್ಪಲು, ಜೂ.೨೩: ಕರ್ತವ್ಯ ನಿರ್ವಹಣೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟಾಟಾ ಸಫಾರಿ ಕಾರೊಂದು ಡಿಕ್ಕಿ ಪಡಿಸಿದ ಪರಿಣಾಮ ಅಧಿಕಾರಿಗಳು ತೆರಳುತ್ತಿದ್ದ ಬೊಲೆರೊ ಜೀಪ್ ಪಲ್ಟಿಯಾಗಿದೆ.

ಜೀಪಿನಲ್ಲಿದ್ದ ಐಟಿಡಿಬಿ ಜಿಲ್ಲಾ ಅಧಿಕಾರಿ ಹೊನ್ನೆಗೌಡ ಅವರ ಕೈ ಬೆರಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಕೈ ಬೆರಳು ಮುರಿತಕ್ಕೊಳಗಾಗಿದೆ.

ಪೊನ್ನಂಪೇಟೆ ಗಿರಿಜನ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಗುರು ಶಾಂತಪ್ಪರವರಿಗೆ ಗಾಯಗಳಾ ಗಿವೆ. ಶಿಕ್ಷಕ ಪ್ರಶಾಂತ್ ಹಾಗೂ ವಾಹನ ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಎದುರಿನಿಂದ ಬರುತ್ತಿದ್ದ ಕಾರು ಅಧಿಕಾರಿಗಳಿದ್ದ ಬೊಲೊರೊ ಜೀಪ್‌ಗೆ ಗುದ್ದಿದ ಪರಿಣಾಮ ಜೀಪು ಪಲ್ಟಿಯಾಗಿದೆ.

ತಿತಿಮತಿ ಆಶ್ರಮ ಶಾಲೆಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪನವರು ಏರ್ಪಡಿಸಿದ್ದ ಅಧಿಕಾರಿಗಳ ಸಭೆ ಮುಗಿಸಿದ ಬಳಿಕ ಜಿಲ್ಲಾ ಐಟಿಡಿಬಿ ಅಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿ ತಮ್ಮ ಜೀಪಿನಲ್ಲಿ ನಿಟ್ಟೂರು ಗ್ರಾಮದ ಹಾಡಿಗೆ ತೆರಳಿದ್ದರು.

ನಂತರ ಬ್ರಹ್ಮಗಿರಿ ಸಮೀಪದ ಕೋತೂರು ಬಳಿಯ ಗಿರಿಜನರ ಹಾಡಿಗೆ ಭೇಟಿ ನೀಡಲು ಅಧಿಕಾರಿಗಳು ತಮ್ಮ ವಾಹನದಲ್ಲಿ ಬರುತ್ತಿದ್ದ ವೇಳೆ ಮಲ್ಲಂಗೆರೆ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಸುದ್ದಿ ತಿಳಿದ ಪೊನ್ನಂಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕೈ ಬೆರಳಿಗೆ ತೀವ್ರ ಸ್ವರೂಪದ ಪೆಟ್ಟಾದ ಜಿಲ್ಲಾ ಐಟಿಡಿಪಿ ಅಧಿಕಾರಿ ಹೊನ್ನೆಗೌಡ ಅವರನ್ನು ಸಮೀಪದ ಕಾನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಡಿಕೇರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಿದ್ದಾರೆ. - ಹೆಚ್.ಕೆ.ಜಗದೀಶ್