ವೀರಾಜಪೇಟೆ, ಜೂ. ೨೩: ಸದಾ ಒಂದಿಲ್ಲೊAದು ವಿವಾದದಲ್ಲಿ ಸಿಲುಕಿಕೊಳ್ಳುವ ವೀರಾಜಪೇಟೆ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆ ಇಂದು ಗೊಂದಲದ ನಡುವೆಯೇ ನಡೆಯಿತು.
ಕಳೆದ ಸಾಮಾನ್ಯ ಸಭೆ ಆಡಳಿತ ಪಕ್ಷದ ಸದಸ್ಯರ ಗೈರು, ಎರಡನೇ ಬಾರಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೈರಿನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಕೊನೆಗೂ ಇಂದು ಪ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಾಯಿ ಸಮಿತಿ ಚುನಾವಣೆ ವಿಚಾರವನ್ನು ಕಾರ್ಯ ಸೂಚಿಯಲ್ಲಿ ಕೈಬಿಟ್ಟಿರುವುದನ್ನು ಸದಸ್ಯ ಅಗಸ್ಟಿನ್ ಬೆನ್ನಿ ಪ್ರಶ್ನಿಸಿದರು.
ಸದಸ್ಯ ರಜನಿಕಾಂತ್ ಕೂಡ ಇದೇ ಪ್ರಶ್ನೆಯನ್ನು ಮುಂದಿಟ್ಟರು. ಪ.ಪಂ ಅಧ್ಯಕ್ಷೆ ಸುಶ್ಮಿತಾ ಇದು ಹೊಸ ಸಭೆಯಾಗಿದ್ದು, ಹಳೆ ಸಭೆಯನ್ನು ರದ್ದುಗೊಳಿ ಸಲಾಗಿದೆ. ಈ ಸಂಬAಧ ಯಾರಿಗೂ ಮಾತನಾಡಲು ಅವಕಾಶವಿಲ್ಲ ಎಂದು ಹೇಳಿದ್ದು, ಗದ್ದಲಕ್ಕೆ ಕಾರಣವಾಯಿತು. ಸದಸ್ಯ ರಾಜೇಶ್ ಸೇರಿದಂತೆ ಇನ್ನಿತರರು ಅಧ್ಯಕ್ಷರ ನಡೆಯನ್ನು ವಿರೋಧಿಸಿದರು.
ರಂಜಿ ಪೂಣಚ್ಚ ಮಾತನಾಡಿ, ಅಯವ್ಯಯ ಮಂಡಿಸದೆ, ಕರಡು ಪ್ರತಿಯನ್ನು ನೀಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸದಸ್ಯರು ಮಾತ್ರ ಕಾರ್ಯಸೂಚಿಯ ಪ್ರಕಾರವೇ ಸಭೆ ನಡೆಸಿ ಎಂದು ಹೇಳಿದರು. ಈ ಸಂದರ್ಭ ಮೊಹಮ್ಮದ್ ರಾಫಿ, ಕೋರಂ ಇಲ್ಲದೇ ಹೇಗೆ ಸಭೆ ನಡೆಯುತ್ತದೆ. ಆಡಳಿತ ಪಕ್ಷದ ಸದಸ್ಯರುಗಳೇ ಸಭೆಗೆ ಬಂದಿಲ್ಲ. ವಿಪಕ್ಷ ಅನುಮೋದಿಸಿದರೆ ಮಾತ್ರ ಸಭೆ ನಡೆಯುವುದು ಎಂದರು.
ಈ ಸಂದರ್ಭ ಕೂಡಲೇ ಗೈರಾಗಿದ್ದ ಆಡಳಿತ ಪಕ್ಷದ ಸದಸ್ಯರುಗಳನ್ನು ಫೋನ್ ಮಾಡಿ ಸಭೆಗೆ ಕರೆಸಿದ ಪ್ರಸಂಗವೂ ನಡೆಯಿತು. ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಮತ್ತೋರ್ವ ಸದಸ್ಯ ಉತ್ತರ ನೀಡುತ್ತಿ ದ್ದನ್ನು ಪೃಥ್ವಿನಾಥ್ ವಿರೋಧಿಸಿದರು. ಕಾಯ್ದೆ ಪ್ರಕಾರ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಅಧ್ಯಕ್ಷೆ ಅಥವಾ ಮುಖ್ಯಾಧಿಕಾರಿ ಉತ್ತರ ನೀಡಬೇಕೆಂದರು.
ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಅಭಿಯಂತರರು ಹಾಗೂ ಮುಖ್ಯಾಧಿಕಾರಿ ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ದೂರಿದ ಪೃಥ್ವಿನಾಥ್, ಇಲ್ಲೀ ತನಕ ನೌಕರರಿಗೆ ಪಿ.ಎಫ್ ಹಣ ನೀಡದೇ ಅಕ್ರಮವಾಗಿದೆ ಎಂದು ದೂರಿದರು. ಸದಸ್ಯರಾದ ರಂಜಿ ಪೂಣಚ್ಚ ೪೪ ಪೌರಕಾರ್ಮಿಕರಿದ್ದು, ಪಟ್ಟಣ ಶುಚಿತ್ವದಲ್ಲಿ ಕೂಡಿಲ್ಲ. ಬೀದಿದೀಪಗಳು ಹಾಳಾಗಿವೆ. ಜನರು ಸದಸ್ಯರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸದಸ್ಯೆ ದೇಚಮ್ಮ ಪಟ್ಟಣದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಯಾಗುತ್ತಿಲ್ಲ. ಯಂತ್ರೋಪಕರಣ ಸರಿಯಾಗಿ ಉಪಯೋಗವಾಗುತ್ತಿಲ್ಲ. ೧೬ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಘಟಕ ವ್ಯರ್ಥವಾಗಿದೆ ಎಂದು ದೂರಿದರು. ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ, ಕಳ್ಳತನ ಪ್ರಕರಣಗಳು ಪತ್ತೆಯಾಗದ ಬಗ್ಗೆ ಧನಿಯೆತ್ತಿದರು. ಕೂಡಲೇ ತುರ್ತುಸಭೆ ಯನ್ನು ಪೊಲೀಸ್ ಇಲಾಖೆಯ ಜೊತೆಗೆ ಕರೆಯಬೇಕು ಎಂದು ಪೃಥ್ವಿನಾಥ್ ಸಲಹೆ ನೀಡಿದರು.
ಛತ್ರಕೆರೆಯ ಬಳಿ ಕಲ್ಲು ಹಾಗೂ ಮಣ್ಣು ತೆರವು ಮಾಡಲು ೫೫ ಸಾವಿರ ಬಿಲ್ ಮಾಡಿರುವ ಪಟ್ಟಣ ಪಂಚಾಯಿತಿ ಕ್ರಮದ ಬಗ್ಗೆ ವಿಪಕ್ಷ ಸದಸ್ಯರು ವಿರೋಧಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅವೈಜ್ಞಾನಿಕ ಘನತ್ಯಾಜ್ಯ ಘಟಕಕ್ಕೆ ಲಕ್ಷಾಂತರ ರೂಪಾಯಿ ವಿನಿಯೋಗ ಮಾಡಲು ಯೋಜಿಸಿರುವ ಬಗ್ಗೆ ಸದಸ್ಯರುಗಳು ವಿರೋಧಿಸಿ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಆ ಹಣವನ್ನು ಬಳಸುವಂತೆ ಸಲಹೆ ನೀಡಿದರು.
ಸದಸ್ಯ ಪೃಥ್ವಿನಾಥ್ ನಗರದ ಮೀನು, ಗೂಡಂಗಡಿಯನ್ನು ರಾತ್ರೋರಾತ್ರಿ ತೆರವು ಮಾಡಿ ಅಲ್ಲಿ ಜಾಹೀರಾತು ಫಲಕ ನಿರ್ಮಿಸಿರುವ ಬಗ್ಗೆ ಫೋಟೋ ಸಹಿತ ಸಭೆಯ ಮುಂದೆ ಪ್ರದರ್ಶಿಸಿದರು. ಪ.ಪಂ. ಸ್ವತ್ತನ್ನು ಯಾಕಾಗಿ ಸದಸ್ಯರ ಗಮನಕ್ಕೆ ತರದೇ ಕಾರ್ಯಚರಣೆಯ ಮೂಲಕ ತೆರವು ಮಾಡಲಾಗಿದೆ. ಇದರಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ದೂರಿದಾಗ ಮುಖ್ಯಾಧಿಕಾರಿ ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಉತ್ತರ ನೀಡಿದರು.
ಆಸ್ಪತ್ರೆಯ ಶವಗಾರದ ಬಳಿ ಭೂಮಿ ಸಮತಟ್ಟು ಮಾಡಲು ರೂ. ೯೮ ಸಾವಿರ ಬಿಲ್ ಮಾಡಿರುವ ಬಗ್ಗೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷೆಯ ವಿರುದ್ಧ ವಾಗ್ಧಾಳಿಯನ್ನು ನಡೆಸಿದರು. ರೂ. ಇಪ್ಪತ್ತು ಸಾವಿರ ವೆಚ್ಚ ತಗಲುವ ಕೆಲಸಕ್ಕೆ ೯೮ ಸಾವಿರ ಎಂದು ತೋರಿಸಿ ಬಿಲ್ ಮಾಡಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮ್ ಕುಮಾರ್ ಹಾಜರಿದ್ದರು.ವರದಿ : ಉಷಾಪ್ರೀತಮ್