ಕೊಡ್ಲಿಪೇಟೆ, ಜೂ.೨೦: ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಸಂತೆ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದು, ಅಂತಹ ಬೈಕ್‌ಗಳನ್ನು ಸಂತೆಮಾಳದ ದಾರಿಯಲ್ಲೇ ತಡೆದು ಪೊಲೀಸರು ದಂಡ ವಿಧಿಸಿದರು.
ಈ ಸಂದರ್ಭ ಮಾತನಾಡಿದ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರು, ದ್ವಿಚಕ್ರ ವಾಹನಗಳಲ್ಲಿ ಬಹುತೇಕ ಮಂದಿ ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿರುವುದು ಕಂಡುಬರುತ್ತಿದೆ. ಅಪಘಾತ ಸಂದರ್ಭ ಪ್ರಾಣಹಾನಿಯಾಗುವ ಸಂಭವವೂ ಅಧಿಕವಿದೆ. ಇದರೊಂದಿಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಪ್ರಕರಣಗಳು ಕಂಡುಬರುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸುಮಾರು ೪೦ ದ್ವಿಚಕ್ರ ವಾಹನಗಳ ಮಾಲೀಕರಿಗೆ ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿ ದಂಡ ವಿಧಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆಯ ೨ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಒಟ್ಟು ೩೦ ಸಾವಿರ ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೊಡ್ಲಿಪೇಟೆ ಉಪ ಠಾಣೆಯ ಮುಖ್ಯಪೇದೆ ಡಿಂಪಲ್, ಸಿಬ್ಬಂದಿಗಳಾದ ಸತೀಶ್, ಪರಮೇಶ್, ಕುಮಾರ್, ಹರೀಶ್ ಅವರುಗಳು ಉಪಸ್ಥಿತರಿದ್ದರು.