ಕುಶಾಲನಗರ, ಜೂ.೨೦ : ಹುಟ್ಟಿನಿಂದಲೇ ಶ್ರವಣದೋಷ ಮತ್ತು ಮಾತುಬಾರದ ವಿಶೇಷಚೇತನ ನವ ವಧುವರರ ವಿವಾಹ ಮಹೋತ್ಸವ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆಯಿತು.

ಕೊಪ್ಪ ಗ್ರಾಮದ ಗುಡ್ಡೇನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧುವರರ ಕಡೆಯ ನೂರಾರು ಸಂಬAಧಿಕರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಸಾಕ್ಷೀಕರಿಸಿದರು.

ಸೀಗೆಹೊಸೂರು ಗ್ರಾಮದ ಶ್ರೀನಿವಾಸ್ ಹಾಗೂ ಭಾಗ್ಯಮ್ಮ ದಂಪತಿಗಳ ಪುತ್ರ ಕೃಷಿಕ ಟಿ.ಸಿ. ಧನಂಜಯ ಮತ್ತು ಬೈಲುಕುಪ್ಪೆ ಬಳಿಯ ಲಕ್ಷಿö್ಮಪುರ ಗ್ರಾಮದ ಕೆ. ರಮೇಶ್ ಮತ್ತು ಪುಷ್ಪಾ ದಂಪತಿಗಳ ಪುತ್ರಿ ಬಿ.ಎಂ. ಅಂಜಲಿ ಹಿರಿಯರ ಸಮ್ಮುಖದಲ್ಲಿ ಕೊಪ್ಪ ಗ್ರಾಪಂ ವ್ಯಾಪ್ತಿಯ ಗುಡ್ಡೇನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮದುವೆಯಾದರು.

ರಾಜ್ಯ ಅಂಗವಿಕಲರ ಪರಿಷತ್ತು ಅಧ್ಯಕ್ಷ ಡಿ.ಕೆ.ಸುರೇಶ್ ಕುಮಾರ್ ರೂ.ಹತ್ತು ಸಾವಿರ ಧನ ಸಹಾಯ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಈ ಸಂದರ್ಭ ಮಾತನಾಡಿದ ಅವರು, ಹುಟ್ಟು ವಿಶೇಷಚೇತನರು ಪರಸ್ಪರ ಒಪ್ಪಿ ವಿವಾಹವಾಗುತ್ತಿರುವುದು ಸಂತೋಷ ತಂದಿದೆ. ಅಲ್ಲದೆ ಇದೊಂದು ವಿಶೇಷ ವಿವಾಹವಾಗಿದೆ. ಅಪಾರ ಜನರ ಇಂತಹ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಪೋಷಕರು ಈ ಬಗ್ಗೆ ಚಿಂತನೆ ನಡೆಸುವುದು ಸೂಕ್ತ ಎಂದರು.

ವಿಕಲಚೇತನರ ಕ್ಷೇಮಾಭಿವೃದ್ಧಿ ಕ್ಲಬ್ ವತಿಯಿಂದ ಧನಂಜಯ ಹಾಗೂ ಅಂಜಲಿ ತಾಯಿ ಅವರಿಗೆ ತಲಾ ಐದು ಸಾವಿರ ನೀಡಿ ಶುಭ ಹಾರೈಸಿದರು. ವರ್ತಕ ರಮೇಶ್ ವಧು ವರರಿಗೆ ನೂತನ ವಸ್ತçಕ್ಕಾಗಿ ಧನ ಸಹಾಯ ಮಾಡಿದರು. ಈ ಸಂದರ್ಭ ವಿಕಲಚೇತನರ ಕ್ಷೇಮಾಭಿವೃದ್ಧಿ ಕ್ಲಬ್ ಕಾರ್ಯದರ್ಶಿ ಲತೇಶ್ ಕುಮಾರ್, ಎಸಳೂರು ಉದಯಕುಮಾರ್, ನಿರ್ದೇಶಕ ಎಂ.ಸಿ.ಸಚಿನ್ ಹಾಗೂ ಪದಾಧಿಕಾರಿಗಳು ಇದ್ದರು.