ಸಿದ್ದಾಪುರ, ಜೂ. ೧೯: ಹಾಲುಗುಂದ ಗ್ರಾಮ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿದ್ದು, ಇದನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಹಾಲುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಹಾಲುಗುಂದ ಗ್ರಾ.ಪಂ ಸದಸ್ಯ ಅಂದಾಯಿ ಅಬ್ದುಲ್ ರೆಹಮಾನ್ ಮಾತನಾಡಿ ಹಾಲುಗುಂದ ಗ್ರಾ.ಪಂ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆಗಳು ಕಾಫಿ ತೋಟದ ಒಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೇ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಜನ ಸಾಮಾನ್ಯರು ಹಾಗೂ ಕೂಲಿ ಕಾರ್ಮಿಕರು ನಡೆದಾಡಲು ಸಾಧ್ಯವಾಗದಂತಹ ಭಯದ ವಾತಾವರಣ ಮೂಡಿದೆ ಎಂದು ಹೇಳಿದರು.

ಕಾಫಿ ತೋಟದ ಒಳಗೆ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಹಾದುಹೋಗಿವೆ. ಇದರಿಂದಾಗಿ ಕಾಡಾನೆಗಳಿಗೆ ಹಾಗೂ ಗ್ರಾಮಸ್ಥರಿಗೆ ಅನಾಹುತವಾಗುವ ಸಂಭವವಿದ್ದು, ಕೆಳಮಟ್ಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ಸ್ಥಳಾಂತರ ಮಾಡುವಂತೆ ತಿಳಿಸಿದ್ದರೂ ಕೂಡ ಸಂಬAಧಪಟ್ಟ ವಿದ್ಯುತ್ ಇಲಾಖೆ ಈ ಬಗ್ಗೆ ಗಮನಹರಿಸದೇ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ ಹಾಲುಗುಂದ ಗ್ರಾ.ಪಂ. ವ್ಯಾಪ್ತಿಯ ಕೊಂಡAಗೇರಿ, ಹಾಲುಗುಂದ ಭಾಗದಲ್ಲಿ ೫೦ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿತ್ತು. ಅಲ್ಲದೇ ಹಲವಾರು ಮನೆಗಳು ಭಾಗಶಃ ಹಾನಿಗೊಳಗಾಗಿತ್ತು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಸಮರ್ಪಕವಾದ ಪರಿಹಾರ ಧನ ಸಿಗದೇ ಸಂತ್ರಸ್ತರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆAದು ಗ್ರಾ.ಪಂ ಸದಸ್ಯರುಗಳು ಹಾಗೂ ಸಂತ್ರಸ್ತರು ತಿಳಿಸಿದರು. ಪರಿಹಾರವನ್ನು ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಯೋಗಾನಂದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭ ಸಂತ್ರಸ್ತರಿಗೆ ಹಾಲುಗುಂದ ಗ್ರಾಮದಲ್ಲಿ ದಾನಿಯೊಬ್ಬರು ೧.೨೦ ಎಕರೆ ಜಾಗವನ್ನು ಉದಾರವಾಗಿ ನೀಡಿದ್ದು, ಆ ಜಾಗದಲ್ಲಿ ಹಲವಾರು ಮಂದಿ ಸಂತ್ರಸ್ತರು ಪುನರ್ವಸತಿಯನ್ನು ನಿರ್ಮಾಣ ಮಾಡಿದ್ದು, ಕೆಲವರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅರಣ್ಯ ಇಲಾಖೆ ಈ ಜಾಗದ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸಮಸ್ಯೆಯಾಗಿರುತ್ತ್ತದೆ. ಇದೀಗ ಮತ್ತೆ ಮಳೆಗಾಲ ಆರಂಭವಾಗಿದ್ದು, ಸಂತ್ರಸ್ತರಿಗೆ ವಾಸ ಮಾಡಲು ಸೂರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಪಂಚಾಯಿತಿ ಮೂಲಕ ಸಂತ್ರಸ್ತರ ಮನೆಗಳಿಗೆ ವಸತಿ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗೊಳಿಸಲು ಜಿಪಿಎಸ್ ತೆಗೆಯಲು ಕೂಡ ತೊಂದರೆಯಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಗ್ರಾಮದ ಯುವಕರು ಮಾತನಾಡಿ ಹಾಲುಗುಂದ ಗ್ರಾಮದಲ್ಲಿ ಕ್ರೀಡಾಕೂಟ ನಡೆಸಲು ಮೈದಾನದ ಕೊರತೆಯಿದ್ದು, ಹಾಲುಗುಂದ ಗ್ರಾಮದಲ್ಲಿರುವ ಸರ್ಕಾರಿ ಜಾಗವನ್ನು ಸಾರ್ವಜನಿಕ ಆಟೋಟಗಳನ್ನು ನಡೆಸಲು ಒದಗಿಸಿಕೊಡಬೇಕಾಗಿ ತಿಳಿಸಿದರು. ಹಾಲುಗುಂದ ಗ್ರಾಮದ ಕಾಫಿ ಬೆಳೆಗಾರರು ಹಾಗೂ ರೈತರು ಮಾತನಾಡಿ ಬಾಣೆ ಜಾಗದ ಪಹಣಿ ಪತ್ರದಲ್ಲಿ ಪಟ್ಟೆದಾರರ ಹೆಸರುಗಳನ್ನು ತಿದ್ದುಪಡಿ ಮಾಡಿ ಸರಿಪಡಿಸಿಕೊಡುವಂತೆ ಮನವಿ ಮಾಡಿದರು. ಅಲ್ಲದೇ ಪೌತಿ ಖಾತೆಗಳನ್ನು ಕೂಡಲೇ ವರ್ಗಾಯಿಸಿಕೊಡುವಂತೆ ಕೋರಿದರು.

ಗ್ರಾ.ಪಂ. ಉಪಾಧ್ಯಕ್ಷ ಕುಶ ನಾಚಪ್ಪ ಮಾತನಾಡಿ ವೀರಾಜಪೇಟೆ ಹಾಲುಗುಂದ ಸಂಪರ್ಕ ಸೇತುವೆಯ ಕಾಮಗಾರಿಯು ಪೂರ್ಣಗೊಳ್ಳದೇ ಇರುವುದರಿಂದ ಈ ಭಾಗದಲ್ಲಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದ್ದು, ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ನಿರ್ಲಕ್ಷö್ಯ ವಹಿಸಲಾಗುತ್ತಿದೆ. ಕೂಡಲೇ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರು ಈ ಸೇತುವೆ ಕಾಮಗಾರಿಗೆ ರೂ. ೨೦ ಲಕ್ಷ ಮಂಜೂರಾಗಿದ್ದು, ಮುಂದಿನ ಒಂದು ವಾರದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆಯಿತ್ತರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಮಾತನಾಡಿ ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಕಂದಾಯ ಇಲಾಖೆಯ ಮೂಲಕ ಜಾರಿಗೆ ತಂದಿದ್ದು, ಕಂದಾಯ ಇಲಾಖೆಯ ನಡಿಗೆ ರೈತರ ಮನೆಯ ಬಾಗಿಲಿಗೆ ಈ ಯೋಜನೆಯಡಿಯಲ್ಲಿ ರೈತರ ಸಮಸ್ಯೆಗಳಿಗೆ ಇಲಾಖೆಯು ಸ್ಪಂದಿಸುತ್ತಿದೆ ಎಂದರು. ೨೦ ಅಂಶಗಳ ಯೋಜನೆಯಲ್ಲಿ ರೈತರ ಆರ್.ಟಿ.ಸಿ ತೊಂದರೆ ನ್ಯೂನತೆಗಳನ್ನು ಸರಿಪಡಿಸಲಾಗುವುದೆಂದರು ಹಾಗೂ ಕಂದಾಯ ಇಲಾಖೆಯಿಂದ ವೃದ್ಧರು, ವಿಶೇಷಚೇತನರಿಗೆ ಅರ್ಹತೆ ಮೇಲೆ ಪಿಂಚಣಿ ಸೌಲಭ್ಯವನ್ನು ಕೂಡಲೇ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ವೀರಾಜಪೇಟೆ ಉಪ ತಹಶೀಲ್ದಾರ್ ಪೊನ್ನು, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್, ಎಂ.ಎನ್ ಹರೀಶ್, ಗ್ರಾ.ಪಂ. ಅಧ್ಯಕ್ಷೆ ವೈ ಸೀತಮ್ಮ, ಉಪಾಧ್ಯಕ್ಷ ಟಿ.ಎ ದಿನೇಶ್, ಪಿಡಿಓ ಕಾಂಚನ, ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಾಕರ್, ಮುತ್ತಪ್ಪ ಹಾಗೂ ಗ್ರಾ.ಪಂ ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.