ಕೊಡ್ಲಿಪೇಟೆ,ಜೂ.೧೯: ಜಾತ್ರೆ ಮಾಳದ ಜಾಗದ ವಿಷಯವಾಗಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎರಡು ಗ್ರಾಮಗಳ ಸಾರ್ವಜನಿಕರ ನಡುವೆ ವಾಗ್ವಾದ ಏರ್ಪಟ್ಟು, ನಂತರ ಪರಿಸ್ಥಿತಿ ತಿಳಿಯಾದ ಘಟನೆ ದೊಡ್ಡಭಂಡಾರದಲ್ಲಿ ಆಯೋಜಿಸಿದ್ದ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಗೊವಿಂದರಾಜ್ ಅವರ ಅಧ್ಯಕ್ಷತೆಯಲ್ಲಿ, ಬೆಸೂರು ಪಂಚಾಯತ್ ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಾತ್ರೆಮಾಳದ ವಿಷಯ ಚರ್ಚೆಗೆ ಒಳಪಟ್ಟಿತು.
ಹಂಡ್ಲಿ ಪಂಚಾಯತ್ ವ್ಯಾಪ್ತಿಯ ಕಿತ್ತೂರು ಗ್ರಾಮದ ಸರ್ವೆ ನಂ. ೧ ರಲ್ಲಿರುವ ೨.೮೪ ಸೆಂಟ್ ಜಾತ್ರೆಮಾಳದ ಜಾಗಕ್ಕೆ ಸಂಬAಧಿಸಿದAತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಜಾಗ ದೊಡ್ಡಭಂಡಾರ ಗ್ರಾಮದ ಸರ್ವೆ ನಂ. ೨೩೪/೨ ರಲ್ಲಿರುವುದಾಗಿ ದೊಡ್ಡಭಂಡಾರ ಗ್ರಾಮಸ್ಥರು ಹೇಳಿದರು.
ಈ ಸಂದರ್ಭ ಉಭಯ ಗ್ರಾಮಸ್ಥರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಗೋವಿಂದರಾಜು ಅವರು, ಉದ್ದೇಶಿತ ಜಾಗವನ್ನು ಕಾನೂನು ಪ್ರಕಾರ ಸರ್ವೆ ಮಾಡಲಾಗುವುದು. ನಂತರ ಯಾವ ಗ್ರಾಮಕ್ಕೆ ಸೇರಿದ್ದೆಂದು ನಿರ್ಧರಿಸಲಾಗುವುದು ಎಂದರು.
ಈ ಬಗ್ಗೆ ಚರ್ಚೆ ನಡೆದು ಎರಡು ಗ್ರಾಮದ ಪ್ರಮುಖರುಗಳು ಮಾತುಕತೆ ನಡೆಸಿ, ಸರ್ವೆ ಮಾಡಿಸಲು ಒಪ್ಪಿ ಚರ್ಚೆಗೆ ಇತಿಶ್ರೀ ಹಾಡಿದರು. ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಗೋವಿಂದರಾಜು, ಸಾರ್ವಜನಿಕರು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಕಂದಾಯ ಇಲಾಖೆ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕೊಡ್ಲಿಪೇಟೆ ಹೋಬಳಿಯ ಕೊಡ್ಲಿಪೇಟೆ, ಬ್ಯಾಡಗೊಟ್ಟ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿದೆ. ಇದರೊಂದಿಗೆ ಗ್ರಾಮಗಳಲ್ಲಿ ಪೌತಿಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತದೆ. ಸಾರ್ವಜನಿಕರು ಅರ್ಜಿ ನೀಡಿ ಸ್ವೀಕೃತಿ ಪಡೆದುಕೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಮಾತನಾಡಿ, ಜನರಿಗೆ ಅನೂಕೂಲ ಕಲ್ಪಿಸಲು ಸರ್ಕಾರದ ಮೂಲಕ ಗ್ರಾಮಗಳಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಆಯೋಜಿಸಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಸಭೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ಸಾರ್ವಜನಿಕರ ಅರ್ಜಿಗಳನ್ನು ಪಡೆದು ಸ್ವೀಕೃತಿ ನೀಡಲಾಯಿತು. ಕೆಲವೊಂದು ಆರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು. ಕೊಡ್ಲೂರು ಗ್ರಾಮದ ಸರ್ವೆ ನಂ. ೧೧೭/೫ ರಲ್ಲಿರುವ ಬೆಸೂರು ಗ್ರಾಮ ಪಂಚಾಯತ್ ಕಟ್ಟಡವಿರುವ ಸರಕಾರಿ ಜಾಗವನ್ನು ಗ್ರಾಮ ಪಂಚಾಯತ್ಗೆ ಮಂಜೂರು ಮಾಡಿಕೊಡಬೇಕು. ನೀರುಗುಂದ ಗ್ರಾಮದ ಸರ್ವೆ ನಂ. ೩೬೬ರ ಊರುಡುವೆ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ಕೂಲಿ ಕಾರ್ಮಿಕ ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸವಾಗಿದ್ದು ಈ ಜಾಗವನ್ನು ಸಕ್ರಮ ಮಾಡಿಕೊಡುವಂತೆ ಗ್ರಾ.ಪಂ. ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ಮನವಿ ಸಲ್ಲಿಸಿದರು.
ದೊಡ್ಡಭಂಡಾರ ಗ್ರಾಮದಲ್ಲಿ ಐತಿಹಾಸಿಕ ಮಲ್ಲೇಶ್ವರ ದೇವಸ್ಥಾನವಿರುವ ಜಾಗಕ್ಕೆ ಪಹಣಿ ಮಾಡಿಕೊಡುವಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು. ಕೃಷಿ ಜಮೀನುಗಳಿಗೆ ತೆರಳಲು ದೊಡ್ಡಭಂಡಾರ ಗ್ರಾಮದ ಸರ್ವೆ ನಂ. ೭೧ ರಲ್ಲಿ ದಾರಿಗೆ ಸಂಬAಧಿಸಿದAತೆ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಗ್ರಾಮಸ್ಥರಾದ ಸುಬ್ಬೇಗೌಡ ಮನವಿ ಸಲ್ಲಿಸಿದರು.
ದೊಡ್ಡಭಂಡಾರ ಕಿರಿಯ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸುವುದು, ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರ ಪರವಾಗಿ ಧರ್ಮಪ್ಪ ಕೋರಿದರು. ಕೂಡ್ಲೂರು ಗ್ರಾಮದ ಸರಕಾರಿ ಶಾಲೆಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಶೇಖರ್ ಗಮನ ಸೆಳೆದರು.
ಗ್ರಾಮಸ್ಥರ ಪಹಣಿ ದಾಖಲೆಗಳ ತಿದ್ದುಪಡಿ, ಪೌತಿ ಖಾತೆ, ಆಹಾರ ಪಡಿತರ ಚೀಟಿ, ಮತದಾರರ ಚೀಟಿ, ಹಕ್ಕುಪತ್ರ, ಮನೆ ಮಂಜೂರಾತಿಗೆ ಸಂಬAಧಿಸಿದAತೆ ೬೦ ಅರ್ಜಿಗಳು ಸಲ್ಲಿಕೆಯಾದವು.
ತಾಲೂಕು ಅಬಕಾರಿ ಉಪ ನಿರೀಕ್ಷಕಿ ಸುಮತಿ, ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ , ಅಭಿಯಂತರ ಸಲೀಂ, ಲೋಕೋಪಯೋಗಿ ಇಲಾಖೆಯ ವೆಂಕಟೇಶ್ ನಾಯಕ್, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಸವಿತಾ ಶೇಖರ್, ಅಭಿವೃದ್ಧಿ ಅಧಿಕಾರಿ ಸುರೇಶ್, ಆರೋಗ್ಯ ಇಲಾಖೆಯ ಡಾ.ತುಂಗಾ, ನಿರೀಕ್ಷಕಿ ದುಂಬಿತಾ, ಶಿಕ್ಷಣ ಇಲಾಖೆಯ ಜಾನ್, ತಾಲೂಕು ಸರ್ವೆ ಅಧೀಕ್ಷಕ ಮಹೇಶ್, ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಸುಶೀಲಾ, ಆಹಾರ ನಿರೀಕ್ಷಕ ವಸಂತ್, ಉಪ ತಹಶೀಲ್ದಾರ್ಗಳಾದ ಪುರುಷೋತ್ತಮ, ಶ್ರೀದೇವಿ, ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕ ಮನುಕುಮಾರ್, ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಚೈತ್ರಶ್ರೀ, ಶ್ವೇತಾಶ್ರೀ, ಗ್ರಾಮ ಸಹಾಯಕರಾದ ಧರ್ಮ, ಭೀಮೇಶ್, ರಾಜು, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.