ಮಡಿಕೇರಿ, ಜೂ. ೧೯: ಅಂತರರಾಜ್ಯ ಖದೀಮನೋರ್ವ ಕೇರಳ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಘಟನೆ ಮಡಿಕೇರಿ ಜಿಲ್ಲಾ ಕಾರಾಗೃಹ ಎದುರು ನಡೆದಿದೆ.
ನಾಪೋಕ್ಲುವಿನಲ್ಲಿ ಪಿಕಪ್ ವಾಹನ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಕೇರಳ ರಾಜ್ಯದ ಕಾಸರಗೋಡಿನ ರಂಷಾನ್ (೨೪) ಪರಾರಿಯಾಗಿರುವ ಆರೋಪಿ.
ರಾಂಷನ್ ಸೇರಿದಂತೆ ಇಬ್ಬರು ಆರೋಪಿಗಳು ಕಳೆದ ಕೆಲ ದಿನಗಳ ಹಿಂದೆ ನಾಪೋಕ್ಲುವಿನ ಕಾಂಪ್ಲೆಕ್ಸ್ ಒಂದರ ಎದುರು ನಿಲ್ಲಿಸಿದ್ದ ಬೊಲೆರೋ ಪಿಕಪ್ ವಾಹನವನ್ನು ಕಳವು ಮಾಡಿದ್ದರು. ನಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಜಿಲ್ಲಾ ಕಾರಾಗೃಹದಲ್ಲಿ ಈರ್ವರು ಶಿಕ್ಷೆಗೆ ಒಳಗಾಗಿದ್ದರು.
ತಾ. ೧೯ ರಂದು ಜಾಮೀನಿನಡಿ ರಂಷಾನ್ ಬಿಡುಗಡೆಯಾಗಿದ್ದಾನೆ. ಈತ ಮಡಿಕೇರಿ ಅಲ್ಲದೆ ರಾಜ್ಯದ ವಿವಿಧೆಡೆ ಸೇರಿದಂತೆ ಕೇರಳ ರಾಜ್ಯದಲ್ಲೂ ಕಳ್ಳತನ ಪ್ರಕರಣದ ಆರೋಪಿಯಾಗಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಈತ ಮಡಿಕೇರಿ ಕಾರಾಗೃಹದಿಂದ ಬಿಡುಗಡೆಯಾಗುತ್ತಿ ರುವ ವಿಷಯ ಅರಿತ ಕೇರಳ ರಾಜ್ಯದ ಪೊಲೀಸರು ಆತನ ಬಂಧನಕ್ಕಾಗಿ ಮಡಿಕೇರಿ ಕಾರಾಗೃಹ ಎದುರು ಕಾಯುತ್ತಿದ್ದರು. ಈ ವಿಚಾರವನ್ನು ಅರಿತ ರಂಷಾನ್ ಬಿಡುಗಡೆಯಾಗಿ ಜೈಲಿನಿಂದ ಹೊರಬರುತ್ತಿದ್ದಂತೆ ಓಡಿ ತಲೆಮರೆಸಿಕೊಂಡಿದ್ದಾನೆ.
ಈ ವಿಚಾರ ಕೇರಳ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ತಿಳಿದು ಆರೋಪಿಯ ಬೆನ್ನತ್ತಿದ್ದಾರೆ. ಆದರೆ, ರಂಷಾನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದೀಗ ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.